Sunday 8 January 2017

ಚಂಗು...


ಚಂಗು..
ಈ ಹೆಸರನ್ನು ಅದೆಷ್ಟೋ ನೋಟ್ ಬುಕ್ ಹಿಂದಿನ ಪೇಜ್ ನಲ್ಲಿ ಬರೆದಿದ್ದೆ., ಅದೇನೊ ಖುಷಿ ಅವನ ನೆನಪಾದರೆ. ಇವತ್ತು ಈ ಹೆಸರು ಬರೆಯಲು ಮನಸ್ಸು ಭಾರ.,...

ಅದು ಬಹುಷಃ ನನ್ನ ಬಿ. ಕಾಂ ಎರಡನೆಯ ಸೆಮಿಸ್ಟರ್ ಎಕ್ಸಾಮ್ ಟೈಮ್. ನಮ್ಮನೆಯ ರಾಣಿ ನಾಲ್ಕು ಮರಿಗಳ ತಾಯಿ.. ನಮ್ಮನೆಯ ನಾಯಿ ಕಾಳು ಸತ್ತು ಒಂದೆರಡು ವರ್ಷವಾಗಿತ್ತೇನೊ, ರಾಣಿ ಬಹಳ ಡಲ್ ಆಗಿಬಿಟ್ಟಿದ್ದಳು. ಅವಳಿಗೆ ಮರಿ ಹಾಕಿಸಿ ಆ ಗೂಡಿನದೊಂದು ಮರಿ ಸಾಕುವುದೆಂದು ತೀರ್ಮಾನವಾಗಿತ್ತು. ಹಾಗೆ ನಮ್ಮನೆಯ ಮುದ್ದು ಸದಸ್ಯನಾಗಿದ್ದು ಚಂಗುವೆಂಬ ಕಂದು ಬಣ್ಣದ ಮರಿ.,. ಮೊದಲು ಅವನಿಗೇನೋ ಬೇರೆ ಹೆಸರಿಟ್ಟಿದ್ದೆವು, ನೆನಪಿಲ್ಲ. ನನ್ನ ತಂಗಿ ರಾಜಕುಮಾರ್ ಸಿನಿಮಾ ನೋಡಿ, ಚಂಗು ಎಂದು ಕರೆಯಲು ಶುರುಮಾಡಿದಾಗ ಅವನು ಎಲ್ಲರಿಗೂ ಚಂಗುವೇ ಆದ. ಹೊಸ ಹೆಸರಿಗೆ ಬಹು ಬೇಗ ಹೊಂದಿಕೊಂಡ. ಚಿಕ್ಕಂದಿನಿಂದಲೂ ಬಹಳ ಸಂಭಾವಿತ. ಅವನದು ನಾಯಿ ಬುದ್ಧಿ ಎನ್ನುವುದಕ್ಕಿಂತ, ಬಹಳ ಬುದ್ಧಿ ಯುಳ್ಳ ನಾಯಿಯಾಗಿದ್ದ‌. ನಮ್ಮ ದುಃಖ, ನಮ್ಮ ಸಂತೋಷ, ಅವನಿಗೆ ಬೈದಿದ್ದು, ಮುದ್ದಿಸಿದ್ದು ಎಲ್ಲವೂ ಅರ್ಥವಾಗುತ್ತಿತ್ತು.


ಅವನಿಗೂ ಅಪ್ಪನ ಕಂಡರೆ ನಮಗೆಷ್ಟು ಭಯವಿತ್ತೋ ಅಷ್ಟೇ ಭಯವಿತ್ತು. ಅಮ್ಮನಿಗೆ ಅವ ನಾಲ್ಕನೇ ಮಗ, ಕಾಕ ಅವನ ಬೆಸ್ಟ್ ಫ್ರೆಂಡ್, ಎಲ್ಲೇ ಕಾಕ ಹೋದರೂ ಅಲ್ಲೆಲ್ಲ ಇವನೂ ಹಾಜರ್, ನಮಗೆಲ್ಲ ಬಾಡಿಗಾರ್ಡ್.. ಊರವರಿಗೆಲ್ಲ ಡೇಂಜರ್.. ಹಾಗಂತ ಅವನೇನು ಕಚ್ಚುವ ನಾಯಿಯೇನಲ್ಲ, ಹೆಚ್ಚು ಕಡಿಮೆ ಮೂರು ಅಡಿ ಎತ್ತರದ, ಜೂಲು ಬಾಲದ, ದಪ್ಪನೆಯ, ಕೆಂಚು ಬಣ್ಣದ ನಾಯಿಯನ್ನು ನೋಡಿದರೆ ಎಲ್ಲರೂ ಹೆದರುತ್ತಿದ್ದರು. ಅದೆಷ್ಟೋ ಜನ ಬರುವ ಮೊದಲು ಫೋನ್ ಮಾಡಿ " ನಾಯಿ ಕಟ್ಟಾಕಿ, ನಂಗ ಬರ್ತಾಇದ್ಯ "ಎಂದು ಹೇಳಿಯೇ ಬರುವುದಿತ್ತು. ಬೆಂಗಳೂರಿನಿಂದ ಮನೆಗೆ ಹೋದ ತಕ್ಷಣ ಓಡಿ ಬಂದು ಕಾಲು ನೆಕ್ಕಿ , ನಮ್ಮನ್ನು ಮುದ್ದಿಸಿ, ತಾನು ಮುದ್ದಿಸಿಕೊಂಡು ಹೋಗುತ್ತಿದ್ದ ನಮ್ಮ ಚಂಗು ಇನ್ನು ನೆನಪು ಮಾತ್ರ......


ಮಂಗ ಬಂದರೆ, ದನ ಬಂದರೆ ಕೂಗದಿದ್ದಾಗ " ಅಂಗಳಕ್ಕೆ ಒಂದು ಸಿಂಗಾರಕ್ಕೆ ನಾಯಿನೆಯ, ಕೂಗದಿಲ್ಲೆ, ಮಾಡದಿಲ್ಲೆ ಎಂದು ಅಮ್ಮ ಬೈಯ್ಯುವಂತಿಲ್ಲ ಇನ್ನು, ಹೊಸಗದ್ದೆಯ ಅಂಗಳದಲ್ಲಿನ್ನು ಸಿಂಗಾರವಿಲ್ಲ, ತಂಗಿ ಪ್ರಜ್ಞಾ ಮೂರುವರೆ ಬಸ್ಸಿಗೆ ಬರುವ ಹೊತ್ತಿಗೆ ಅವಳ ಬರುವಿಕೆಯನ್ನು ಗೇಟ್ ಹತ್ತಿರ ನಿಂತು ಕಾಯುವವರಿಲ್ಲ .ಇಂದು ಗದ್ದೆಗೆ ಹೊರಡುವ ಕಾಕನ ಕಾಲುಗಳು ತಡವರಿಸಬಹುದು. ಹೊರಗಡೆಯಿಂದ ಬಂದ ತಕ್ಷಣ. " ಅವನೆಲ್ಲಿ ಬಸ್ಯಾ" ಎಂದು ಹುಡುಕುವ ಅಪ್ಪನ ಕಣ್ಣುಗಳು ನಿರಾಶೆಗೊಳ್ಳಬಹುದು. ಮುಸ್ಸಂಜೆಯಲ್ಲಿ ದೋಸೆ ತಿನ್ನುತ್ತಾ ಕೊನೆಯ ತುತ್ತೊಂದನ್ನು ನಾಯಿಗೆ ತಿನ್ನಿಸುವ ಪರಿಪಾಠವುಳ್ಳ ಅಮ್ಮನಿಗೆ ದೋಸೆ ಗಂಟಲಲ್ಲಿ ಇಳಿಯದೇ ಇರಬಹುದು. "ಈ ಕುನ್ನಿ ವಸ್ವಂತಕ್ಕೆ ಸಂಕ್ಟ"ಎಂದು ಬಯ್ಯುತ್ತಾ ನಾಯಿಯನ್ನು ಒಳಗಡೆ ಹಾಕುತ್ತಿದ್ದ ಚಿಕ್ಕಮ್ಮ ಇಂದು ತಡವರಿಸಬಹುದು. ಅವನ ಒಂದು ಕ್ಷಣವೂ ಬಿಟ್ಟಿರದ ರಾಣಿ ಮನೆಯ ಮೂರು ಸುತ್ತು ತಿರುಗಿ ಅವನಿಗಾಗಿ ಹುಡುಕಿರಬಹುದು.


ಇನ್ನು ಬೆಂಗಳೂರಿನಿಂದ ಮನೆಗೆ ಹೋದರೆ ಅವನ ಖಾಲಿ ತಟ್ಟೆ, ಸರಪಳಿಗಳು ಅವನ ನೆನಪಿನ ಸುರುಳಿ ಬಿಚ್ಚುತ್ತವೆ. ಅವನ ಬಗೆಗೆ ನೂರು ಪ್ರಶ್ನೆ ಕೇಳುವ ಪಾರ್ಥನಿಗೆ ಅಕ್ಕ ಏನೆಂದು ಉತ್ತರಿಸುತ್ತಾಳೋ.. "ಬೌ ಬೌ ನೋಡು " ಎಂದರೆ ಅರ್ಥವಾಗದೆ, " ಚಂಗು ನೋಡು" ಎಂದ ತಕ್ಷಣ ನಾಯಿಯೆಡೆಗೆ ನೋಡುವ ನನ್ನ ಮಗಳಿಗೆ ನಾನೇನು ಹೇಳಲಿ....

ಚಂಗು ಮಿಸ್ ಯು .. ಲವ್ ಯೂ..

2 comments:

  1. ಅತಿ ನಂಬಿಕಸ್ಥ ಪ್ರಾಣಿ ಎನ್ನುವುದಕ್ಕಿಂತ ದೇವನ ಸೃಷ್ಠಿ ಎಂದರೆ ಸರಿ ಹೋದೀತು. ಮನೆಯ ಒಬ್ಬ ಸದಸ್ಯನ ಪಟ್ಟ ಸಿಗುವುದು ಎಲ್ಲರಿಗೂ ಸಾಧ್ಯವಿಲ್ಲ. ಅವನ ನೆನಪು ಮನದಲ್ಲಿ ಶಾಶ್ವತ ಎನ್ನಿಸುವುದು ಸದಾ ಇದ್ದಾನೆ ಎಂದು ನೆನೆಸಿಕೊಳ್ಳುವುದರಿಂದ..

    ಬಹಳ ಮಾಸಗಳಾದ ಮೇಲೆ ಬ್ಲಾಗ್ ಕಡೆಗೆ ಬಂದಿರುವುದು ಖುಷಿ ತಂದರೂ, ಇಂತಹ ಒಂದು ದುಃಖತಪ್ತ ಸುದ್ದಿಯ ಜೊತೆ ಬಂದಿರುವುದು ಅಷ್ಟೇ ಬೇಸರ.

    ಚಂಗು (ಚಂಗುಮಣಿ) ಅಣ್ಣಾವ್ರ ಹುಲಿಯ ಹಾಲಿನ ಮೇವು ಚಿತ್ರದ ಪಾತ್ರದ ಹೆಸರು.. ಅಣ್ಣಾವ್ರ ನೆನಪು ಸದಾ ಅಮರ ಹಾಗೆಯೇ ಚಂಗುವಿನದ್ದು ಕೂಡ..

    ಉತ್ತಮ ನೆನಪಿನ ಲೇಖನ.. ಎಸ್ ಪಿ

    ReplyDelete
  2. Applying PAN Card online through PANSEVA is much more safer than using a pan card agent. You do not need to share your personal data with PAN CARD Agent, You can simply Use this website to fill your data and proof, your pan card application are directly checked by our PAN Officers safely and securely.

    ReplyDelete