Saturday 11 July 2015

ಕಾಲ ತುದಿಯಲ್ಲಿನ ಕಪ್ಪು ಮಚ್ಚೆ

"ಅರೇ!  ಕಾಲ ತುದಿಯಲ್ಲೊಂದು ಮಚ್ಚೆ ಇದೆಯಲ್ಲ , ಬಹಳ ಅದೃಷ್ಟವಂತೆ ನೀನು " ಕಾಲಿನ ಹೆಬ್ಬೆರಳ ತುದಿಯ ಪುಟ್ಟ ಮಚ್ಚೆಯನ್ನು ನೋಡಿ ಎಲ್ಲರೂ ಹೇಳುವ ಮಾತು.ಅದರಂತೆ ಅದೃಷ್ಟವಂತೆ ನಾನು. ಚಂದದ ಮನೆಯಲ್ಲಿನ ಮುದ್ದು ಮಗಳು .. ಹೇಳಿದಂತೆ ಕೇಳೋ  ಅಮ್ಮ . ಅಂಗೈಯಲ್ಲೇ ಜಗತ್ತನ್ನು ತಂದಿಡುವ ಅಪ್ಪ. ದೇಶ ಸುತ್ತುವ ಚಟ ನನ್ನದು. ಅಪ್ಪನೊಂದಿಗೆ ಪ್ರಪಂಚ ಸುತ್ತುತ್ತಿದ್ದೆ.. ಹಾಗೆಯೇ ಪರದೇಶದಲ್ಲಿ ನನ್ನ ದೇಶದವನಾಗಿ  ಪರಿಚಯವಾದ ಹುಡುಗ ನೀನು ಥೇಟ್ ಡಿಡಿ ಎಲ್ ಜೆ ಯಲ್ಲಿ ಖಾಜೋಲ್ ಗೆ ಶಾರುಖ್ ಸಿಕ್ಕ ಹಾಗೆ. ಹಾಗೆಯೇ ಅಷ್ಟೇ ಬೇಗ  ಹೃದಯದಲ್ಲೂ ಇಳಿದುಬಿಟ್ಟೆ ! ಯಾರನ್ನೂ ಒಳಮನೆಯೊಳಗೆ  ಬಿಟ್ಟುಕೊಳ್ಳದವಳು ಮನಸ್ಸನ್ನೇ ನಿನಗೆ ಕೊಟ್ಟಿದ್ದೆ. ನೀ ಒಪ್ಪಿದಾಗಲಂತೂ ನನ್ನ ಅದೃಷ್ಟಕ್ಕೆ  ನಾನೇ ಹೆಮ್ಮೆ ಪಟ್ಟಿದ್ದೆ .  

ಮನೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಾಗ ಕನಸುಗಳಿಗೂ ರೆಕ್ಕೆ ಬಂದಿತ್ತು . ಆದರೆ ನಿನ್ನಮ್ಮನಿಗೆ ಸೊಸೆಯಾಗಿ ಬರುವವಳು ಡಬ್ಬಲ್ ಡಿಗ್ರಿ ಮಾಡಿರಬೇಕು ಎಂದಾಗ ಮಾತ್ರ ಸ್ವಯಂವರದಲ್ಲಿ ನಿಂತ ಅರ್ಜುನ ,ರಾಮರ ನೆನಪಾಗಿದ್ದು ಸುಳ್ಳಲ್ಲ. ದೇಶ ಸುತ್ತುವುದರಲ್ಲಿ ಇದ್ದ ಆಸಕ್ತಿ ನನಗೆ ಕೋಶ ಓದುವುದರಲ್ಲಿ ಇರಲಿಲ್ಲ. ಓದಬೇಕೆಂದು ಖಂಡಿತಾ ಆಸೆಯಿರಲಿಲ್ಲ .ಕುಳಿತು ಓದುವುದು ನನ್ನಿಂದ ಆಗದ ಮಾತಾಗಿತ್ತು. ಜಿಂಕೆಯಂತೆ ಜಿಗಿಯಬೇಕು.. ಇಲ್ಲ ರೆಕ್ಕೆ ಕಟ್ಟಿಕೊಂಡು ಹಾರಬೇಕು ಇಷ್ಟೇ ನನ್ನ ಪ್ರಪಂಚದಲ್ಲಿದ್ದುದು. ಆದರೆ  ನಿನಗಾಗಿ ಓದಲೇ ಬೇಕೆಂದು ನಿರ್ಣಯಿಸಿದೆ. ನನಗಾಗಿ  ಕಂಡ ಮೊದಲ ಕನಸು ನೀನು. ಹಾಗಾಗಿಯೇ ನಿನಗಾಗಿ ಐದು ವರ್ಷಗಳ ತಪಸ್ಸಿಗೆ ಕುಳಿತುಬಿಟ್ಟೆ..! ಒಳ್ಳೆ ಕಾಲೇಜ್ , ಒಳ್ಳೆ ಗೆಳತಿಯರು , ಎಗ್ಸಾಮ್ , ಮಾರ್ಕ್ಸ್  ಎಲ್ಲದರಲ್ಲೂ ಅದೃಷ್ಟವಂತೆ ಕಣೋ ನಾನು. ನಿಮ್ಮಮ್ಮ ಕೂಡಾ ಒಪ್ಪಿದ್ದಾರೆ, ಐದು ವರ್ಷ ಕಾಯಲು  ತಯಾರಿದ್ದಾರೆ ಎಂದಾಗಲಂತೂ  ಆಕಾಶಕ್ಕೆ ಮೂರೇ ಗೇಣು ಎನ್ನುವಂತೆ .. ಹೆಬ್ಬೆರಳ ತುದಿಯ ಪುಟ್ಟ ಮಚ್ಚೆಯ ಸವರಿ ಖುಷಿಪಟ್ಟಿದ್ದೆ. 

ವಾರಕ್ಕೊಂದು ದಿನ ನಿನ್ನೊಂದಿಗೆ ಸುತ್ತಾಟ, ಮುಸ್ಸಂಜೆಯಲ್ಲಿ ಬೆರಳು ಬೆಸೆದು ಮೂಡಿಸಿದ ಹೆಜ್ಜೆ ಗುರುತುಗಳು, ಮಧ್ಯರಾತ್ರಿಯ ಪಿಸುಮಾತುಗಳು, ಅಯ್ಯೋ ಈ ಓದು ಸಾಕು ಎಂದು ಮನಸ್ಸು ರಚ್ಚೆ ಹಿಡಿದಾಗೆಲ್ಲ  ಮತ್ತೆ ಹುರಿದುಂಬಿಸಿ ಓದುವಂತೆ ಮಾಡಿದ ನಿನ್ನ ತೆರೆದ ತೋಳುಗಳು ... ನಾಲ್ಕು ವರ್ಷಗಳು ಬೆಣ್ಣೆಯಂತೆ ಕರಗಿದ್ದು ಎಲ್ಲಿ ಗೊತ್ತಾಗಿತ್ತು ಹೇಳು. ಕೊನೆ ವರ್ಷದ ಓದು .. ಮುಗಿದರೆ  ನಿನ್ನೆಡೆಗೆ ಓಡಿ ಬರಬೇಕೆಂದುಕೊಂಡಿದ್ದೆ . 

ಆದರೆ ಅದು ಯಾವಾಗ  ವಾರದ ತಿರುಗಾಟಗಳು ಅಪರೂಪವಾಗ ತೊಡಗಿದವೋ , ಮಧ್ಯ ರಾತ್ರಿಯ ಪಿಸುಮಾತುಗಳು ಕರಗಲಾರಂಭಿಸಿದವೊ ತಿಳಿಯಲೇ ಇಲ್ಲ ನೋಡು. ಫೋನ್ ಕಾಲ್ ಗೆ , ಭೇಟಿಗೆ ಎಲ್ಲ ನೀ ಬ್ಯುಸಿ ಎನ್ನ ತೊಡಗಿದಾಗಲೆಲ್ಲ ಅನುಮಾನ ಪಡುತ್ತಿದ್ದ ಮನಸ್ಸಿಗೆ " ವಯಸ್ಸು ಜಾಸ್ತಿಯಾದಂತೆ ಮನಸ್ಸು ಮಾಗುತ್ತೆ , ಹುಡುಗ ಜೀವನದಲ್ಲಿ ಸೀರಿಯಸ್ ಆಗುತ್ತಿದ್ದಾನೆ don't worry " ಎಂದು ಸಮಾಧಾನಿಸುತ್ತಿದ್ದೆ. ಆದರೆ ನಿಧಾನವಾಗಿ ನೀ ಇನ್ನೊಂದು ಸೆಳವಿಗೆ ಜಾರುತ್ತಿರುವುದು ಮಾತ್ರ ಗೊತ್ತಾಗಲೇ ಇಲ್ಲ ನೋಡು.   ಫೋನ್   ಕಾಲ್ ಗಳು ಕಡಿಮೆಯಾಗುತ್ತಾ ಬಂದಾಗ, ನೀ ನನ್ನ avoid  ಮಾಡುತ್ತಾ ಬಂದಾಗ ನಾನು ಅರ್ಥ ಮಾಡಿಕೊಳ್ಳಬೇಕಿತ್ತು "ಕೆಲವು ಕನಸುಗಳಿಗೂ expiry date  ಇರುತ್ತದೆ" ಎಂದು. 

ಸುಮಾರು ಒಂದೂವರೆ ತಿಂಗಳ ನಂತರ  ಮೂರು ದಿನದ ಹಿಂದೆ ನಿನ್ನ ಕಾಲ್ ಬಂದಾಗ ಕಾಲು ಎಡವಿಕೊಂಡಿದ್ದೆ . ಉಗುರ ಸಹಿತ ಕಿತ್ತು ಬಂದಿತ್ತು ಚರ್ಮ. ಅವತ್ತು ಹಾಕಿದ ಬ್ಯಾಂಡೇಜ್ ಇವತ್ತು ತೆಗೆದಿದ್ದಾರೆ . ನಿನಗಲ್ಲಿ ಮದುವೆಯ ಸಂಭ್ರಮವಂತೆ  .. ನಿನ್ನ ಅಮ್ಮನಿಗಿದ್ದಷ್ಟೂ ತಾಳ್ಮೆ ನಿನ್ನಲ್ಲಿರಲಿಲ್ಲವಲ್ಲೋ ಹುಡುಗ.. ಕಾಲಿನ ಹೆಬ್ಬೆರಳನ್ನೊಮ್ಮೆ ನೋಡಿಕೊಂಡೆ. ಮಚ್ಚೆ ಅಳಿಸಿ ಹೋಗಿದೆ . ಅದೃಷ್ಟ ಕಳಚಿ ಬಿದ್ದಿದೆ. ಓದು ಕೈಯಲ್ಲಿದೆ . ಪ್ರಯತ್ನ ಕೈ ಹಿಡಿಯುತ್ತದೆ ಅಲ್ಲವಾ? ಬದುಕು ಮುನ್ನಡೆಸುತ್ತೇನೆ ಎನ್ನುವ ಭರವಸೆ ಕೊಡುತ್ತಿದೆ. ಅದರಂತೆ ಮುನ್ನಡೆಯುತ್ತಿದ್ದೇನೆ