Friday 28 November 2014

ಅಕ್ಷತೆಯೊಂದಿಗೆ ಅಕ್ಷಯವಾಗಲಿ ಬದುಕು ..

ಖುಷಿಯಾಗುತ್ತಿದೆ . ಗೆಳೆಯ ಗೆಳತಿಯರೆಲ್ಲ ಹೊಸ ಬಾಳಿಗೆ ಅಡಿ ಇಡುತ್ತಿದ್ದಾರೆ . ನವೆಂಬರ್ 28 ರಿಂದ ಡಿಸೆಂಬರ್ 18 ರವರೆಗಿನ ಸರಿ ಸುಮಾರು 7 ರಿಂದ 8 invitation card ಗಳು ನನ್ನ ಕೈಲಿವೆ . ಮದುವೆಯೆಂದರೆ ... ಅಂತ ಶುರು ಮಾಡಿ ಅದರ ಆದಿ ಅಂತ್ಯದವರೆಗೆ ಬರೆದು ಇತಿಶ್ರೀ ಹಾಡಿ ಎಲ್ಲರನ್ನು bore ಹೊಡೆಸಲಾರೆ .

"ಪ್ರತಿದಿನವೂ ಹೊಸ ಕುತೂಹಲಗಳೊಂದಿಗೆ ಶುರುವಾಗಿ , ನಾಳೆಯೆಡೆಗೊಂದಿಷ್ಟು  ಕುತೂಹಲ , ಕನಸುಗಳನ್ನು ಕೊಡುತ್ತಾ ಸಶೇಷವಾಗಲಿ  ಬದುಕು .. "

ಗೆಳತಿ ಮಮತಾಳ  ಮದುವೆ ಕರೆಯೋಲೆಗಾಗಿ ಒಂದೆರಡು ಸಾಲುಗಳನ್ನು ಗೀಚಿದ್ದೆ.  ಅದರೊಂದಿಗೆ ಎಲ್ಲ ಗೆಳೆಯ ಗೆಳತಿಯರಿಗೂ , ಅವರೊಡನಾಡಿಯಾಗಿ , ಜೀವನಾಡಿಗಳಾಗಿ  ಬರುವವರಿಗೂ ನನ್ನ  ಪುಟ್ಟದೊಂದು ಹಾರೈಕೆಯಿದೆ 

ಎದೆಯೆತ್ತರಕ್ಕೆ ಬೆಳೆದ ಮಗಳು ತೊಡೆಯೇರಿ 
ಕುಳಿತಿರಲು ಹೊಸ ಬಾಳ ಪಯಣಕ್ಕೆ "ನಾಂದಿ"

ಮಂಟಪದಿ ಅಂತರಪಟ ಸರಿಯೇ "ಮಾಲೆ"ಗಳು 
ಬದಲಾಗಲು ಭಾವದಲ್ಲೂ ಬದಲಾವಣೆ .. 

"ತಾಳಿ" ತಾಳ್ಮೆಗೆ ಸಂಕೇತವಾದರೆ "ಪಾಣಿಗ್ರಹಣ"ದಿ 
ಜೊತೆಯಿರುವ ಭರವಸೆ ... 

ಲೆಕ್ಕಕ್ಕೆ ಏಳಾದರೂ ಲೆಕ್ಕವಿರದಷ್ಟು  ಹೆಜ್ಜೆಗಳಿಗೆ 
"ಸಪ್ತಪದಿ"ಯ ಮುನ್ನುಡಿ .. 

ಹೊಸ ಸಂಸ್ಕಾರಕ್ಕೆ "ಅಗ್ನಿಸಾಕ್ಷಿ "

"ವರಪೂಜೆ" ಯಲ್ಲಿ  ಅಳಿಯ ದೇವರಾದರೆ 
ಗೃಹಲಕ್ಷ್ಮಿಯಾಗಿ "ವಧುಪ್ರವೇಶ" .. 


ಅಕ್ಷತೆಯೊಂದಿಗೆ  ಅಕ್ಷಯವಾಗಲಿ ಬದುಕು .. ಜೀವನದಿಯಾಗಲಿ ಪ್ರೀತಿ .. 

Thursday 16 October 2014

ಇಡಿಯಾದದ್ದು ಒಡೆದು ಹಿಡಿಹಿಡಿಯಾಗಿ...

ಮಿಡ್ಲ್ ಸ್ಕೂಲ್ ದಿನಗಳವು. ಅವನ ಕಣ್ಣುಗಳು ಬಹಳ ಇಷ್ಟವಾಗಿ ಬಿಟ್ಟಿದ್ದವು. ನೋಟಕ್ಕೆ ಪ್ರತಿ ನೋಟ , ಕಳ್ಳ ಸನ್ನೆಗಳಲ್ಲಿ ಹತ್ತಿರವಾಗಿ ಬಿಟ್ಟಿದ್ದೆವು. ಮಕ್ಕಳೆಲ್ಲಾದರೂ ಹಾದಿ ತಪ್ಪಿ ಬಿಟ್ಟರೆ ಎಂಬ ಕಾರಣದಿಂದ ಹಾಕಿದ ಪಾಲಕರ ಸರ್ಪಗಾವಲಿನಿಂದಾಗಿ ಪ್ರಯಾಸವಾಗಿ, ಭೇಟಿಯಾಗಬೇಕಿತ್ತು. ಯಾರಾದರೂ ನೋಡಿದರೆ, ಮನೆಯಲ್ಲಿ ಹೇಳಿಬಿಟ್ಟರೆ .. ಎಂಬ ಭಯ ಕಾಡುತ್ತಿತ್ತು. ಆ ಭಯದ ಭೇಟಿಗಳಲ್ಲೂ ಹಿತವಿರುತ್ತಿತ್ತು. ಪ್ರತಿ ಸಲವೂ ಮನೆಯವರನ್ನು ಗೆದ್ದೆನೆಂಬ ಅಹಂ ಭಾವವಿರುತ್ತಿತ್ತು.


ಪ್ರೇಮ ಪತ್ರಗಳ ವಿನಿಮಯ, ಸಣ್ಣ ಪುಟ್ಟ ಗಿಫ್ಟ್ ಗಳ ವಿನಿಮಯವೂ ನಡೆದಿತ್ತು. ಅವನು ಮುದ್ದಿಸಿದ್ದು , ಮುತ್ತಿಟ್ಟಿದ್ದೆಲ್ಲ ಪ್ರಥಮ ರೋಮಾಂಚನಗಳು. ಎಸ್ ಎಲ್ ಸಿಮುಗಿಸಿ ಬೇರೆ ಊರಿಗೆ ಹೊರಟವನು ಕೂಡ ಕತ್ತಿಗೆ ಮುತ್ತಿಕ್ಕಿ "ನೋಡು ನಾ ಕೊಟ್ಟ ಗಿಫ್ಟ್ ಮತ್ತು ಪತ್ರಗಳನ್ನೆಲ್ಲ ಜೋಪಾನವಾಗಿಟ್ಟುಕೋ. ನೀನೆ ನನ್ನ ಜೀವ" ಅಂತ ಹೇಳಿ ಹೊರಟಿದ್ದ . ಅದಾಗಿ ಮೂರು ವರುಷಗಳು ಅವನ ಪತ್ತೆಯಿಲ್ಲ. ಕಾಲೇಜಿನ ದಿನಗಳು. ಹೊಸ ಹೊಸ ಪರಿಚಯಗಳು. ಅದೆಷ್ಟೋ ಜನ ಪರಿಚಿತರಾದರೂ ಅವನು ಮಾತ್ರ ಮನಸಿನಿಂದ ದೂರವಾಗಿರಲೇ ಇಲ್ಲ. ಅದ್ಯಾವುದೋ ಹುಡುಗನ ಮೇಲೆ ಆ ಕ್ಷಣಕ್ಕೊಂದು ವಿನಾಕಾರಣದ ಆಕರ್ಷಣೆ ಮೊಳಕೆಯೊಡೆದರೂ, ಅದು ಕ್ಷಣಿಕವೇ ಆಗಿರುತ್ತಿತ್ತು. ಮನಸ್ಸಿನಲ್ಲಿ ಅವನೊಬ್ಬನಿಗೆ ಜಾಗವಿತ್ತು. ನನ್ನೊಳಗಿನ ಕೋಟೆಯಲ್ಲಿ ಅವನನ್ನು ಭದ್ರವಾಗಿರಿಸಿಕೊಂಡಿದ್ದೆ. ಯಾರನ್ನೂ ಗೆಳೆಯರನ್ನಾಗಿಸಿಕೊಳ್ಳಲಿಲ್ಲ. ಇದ್ದ ಹುಡುಗಿಯರು ಕೂಡ ಹಾಯ್ .. ಬಾಯ್ ಎನ್ನುವಂತೆ ಗೆಳತಿಯರಾಗಿದ್ದರು. ಅವನ ಪತ್ರಗಳು , ಗಿಫ್ಟ್ ಗಳ ಜೊತೆ ಅವನಿಗಾಗಿ ಕಾಯುತ್ತಿದ್ದವಳಿಗೆ ಅವೊತ್ತೊಂದು ದಿನ ಬಂತು ಒಂದು ಪತ್ರ. ಅವನದೇ ಪತ್ರಗಳಲ್ಲೇ ಉಸಿರಾಡಿಕೊಂಡಿದ್ದವಳಿಗೆ ಅವನ ಕೈ ಬರಹ ತಿಳಿಯದೇ ಇರಲಿಲ್ಲ. ಅಪ್ಪ ಅಮ್ಮಂದಿರ ಅನುಮಾನದ ದೃಷ್ಟಿ ನನಗಲ್ಲವೆಂಬಂತೆ ಓಡಿ ಹೋಗಿ ಬಾಗಿಲು ಹಾಕಿಕೊಂಡು ಓದಿದ್ದೆ . ಕುಶಲೋಪರಿಗಳ ಮಾತುಗಳಾದ ಮೇಲೆ ಊರಿಗೆ ಬಂದಿದ್ದೇನೆ. ನನಗಿರುವ ಏಕೈಕ ಸ್ನೇಹಿತೆ ನೀನು ಹಾಗಾಗಿ ನಿನ್ನನ್ನು ಭೇಟಿಯಾಗಬೇಕೆಂದು ಬರೆದಿದ್ದನ್ನು ಓದಿದಾಗ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಂಥಹ ಖುಷಿ. ಅಲ್ಲಿ ಬರೆದಿದ್ದ "ಏಕೈಕ ಸ್ನೇಹಿತೆ " ಎಂಬ ಮಾತು ಖುಷಿ ಕೊಡುತ್ತಿತ್ತು.


ಹಳೆಯ ಸವಿಗಳ ಮೆಲಕು ಹಾಕುತ್ತಾ , ಅವನಲ್ಲಿಗೆ ಹೋದಾಗ ಯಾಕೋ ಹೃದಯ ಕಂಪಿಸುತ್ತಿತ್ತು. ನನ್ನೆಲ್ಲ ಖುಷಿಗಳೊಂದಿಗೆ , ಅವನ ಹಳೆಯ ಪತ್ರಗಳು , ಗಿಫ್ಟ್ ಗಳು ,ಅವನಿಗೆಂದೇ ಬರೆದ, ಪೋಸ್ಟ್ ಮಾಡದ ಪತ್ರಗಳು ,ಅವನಿಗಾಗಿ ತೆಗೆದುಕೊಂಡಿದ್ದ ಬರ್ತ್ ಡೇ ಗಿಫ್ಟ್ ಎಲ್ಲವನ್ನೂ ಅವನೆದುರು ಹರಡಿದಾಗ ಪುಟ್ಟ ಮಗುವೆಂಬಂತೆ ನೋಡಿದ್ದ ಅವನು ."ನೋಡು ಎಲ್ಲ ಎಷ್ಟು ಜೋಪಾನವಾಗಿಟ್ಟಿದ್ದೀನಿ, ನಿನ್ನನ್ನು ನನ್ನೆದೆಯಲ್ಲೇ ಹೀಗೆ ಜೋಪಾನ ಮಾಡುತ್ತೀನಿ, ಐ ಲವ್ ಯು ಕಣೋ" ಎಂದೆ. " ಸಿಲ್ಲಿ ಗರ್ಲ್ ಇದನ್ನೆಲ್ಲಾ ಇನ್ನೂ ಇಟ್ಕೊಂಡಿದೀಯಾ ? ಏನು ಬೆಲೆ ಬಾಳುತ್ತವೆ ಇವೆಲ್ಲ , ಗುಜರಿಗೆ ಹಾಕೊದಲ್ಲವಾ "ಎನ್ನುವ ಮಾತುಗಳು ಅವನ ಬಾಯಿಂದಲೇ ಬಂದದ್ದು ಎಂದು ಅರ್ಥಮಾಡಿಕೊಳ್ಳಲು ತುಂಬಾ ಕ್ಷಣಗಳೇ ಹಿಡಿದವು. ಸಣ್ಣಗೆ ಕಂಪಿಸುತ್ತಾ " ಅಲ್ಲ ಕಣೋ , ಅವತ್ತಿನ ಪ್ರೀತಿ , ನೀ ಮುದ್ದಿಸಿದ್ದು , ಮುತ್ತಿಟ್ಟಿದ್ದು ಇದಕ್ಕೆಲ್ಲ ಏನರ್ಥ ?"ಎಂದು ಮುಗ್ದತೆಯಿಂದ ಕೇಳಿದ್ದೆ .ಅದಕ್ಕೆ ಅವನು " ಯಾವ ಕಾಲದಲ್ಲಿದೀಯಾ ತಾಯಿ , ಅದೆಲ್ಲ ಆ ಏಜ್ ನ ಅಟ್ರ್ಯಾ ಕ್ಷನ್ ಅಷ್ಟೇ, ಗರ್ಲ್ಸ್ ತುಂಬಾ ಜನ ಫ್ರೆಂಡ್ಸ್ ಆಗಬಹುದು, ಆದ್ರೆ ಎಲ್ಲಾರು ಗರ್ಲ್ ಫ್ರೆಂಡ್ ಆಗೋದಿಕ್ಕೆ ಚಾನ್ಸ್ ಇಲ್ಲ .ಸುಮ್ನೆ ಈ ಪ್ರೀತಿ ಪ್ರೇಮ ಅಂತೆಲ್ಲ ತಲೆ ಕೆಡಿಸಿಕೊಳ್ಳಬೇಡ. ಓದಿನ ಕಡೆ ಗಮನ ಹರಿಸು. ನೀ ನನ್ ಫ್ರೆಂಡ್ ಅಷ್ಟೇ ಕಣೆ , ಯು ಆರ್ ಮೈ ಫ್ರೆಂಡ್ , ಅಂಡ್ ಫ್ರೆಂಡ್ ಓನ್ಲಿ " ಎಂದುಮಾತು ಮುಗಿಸಿದ್ದ.


ಇಡಿಯಾದ ಪ್ರೀತಿ ಹಿಡಿ ಹಿಡಿಯಾಗಿ ಒಡೆದಿತ್ತು . ಅಂದಿನಿಂದ ಚೂರಾದ ಪ್ರತಿ ಹೃದಯದ ತುಂಡಿನಲ್ಲೂ ಒಬ್ಬೊಬ್ಬ ಹುಡುಗರು ಕಾಣತೊಡಗಿದರು ಒಡೆದ ಕನ್ನಡಿಯಚೂರುಗಳಲ್ಲಿ ಮೂಡುವ ಪ್ರತಿಬಿಂಬಗಳಂತೆ.ಪ್ರತಿಯೋಬ್ಬನನ್ನು ಪ್ರೀತಿಸಿದೆ. ಪ್ರತಿಯೊಬ್ಬನಿಗೂ ಅವನಿಗಂದ ಪ್ರೀತಿಯ ಮಾತುಗಳನ್ನೇ ಹೇಳಿದೆ. ಪ್ರತಿಯೊಬ್ಬರೂ ಅವನಂದ ಪ್ರೀತಿಯ ಮಾತುಗಳನ್ನೇ ಆಡಿದರು ..!! ಬೇಜಾರಾದಾಗೆಲ್ಲ ಬದಲಾಯಿಸಿದೆ ಹುಡುಗರನ್ನು ಬಟ್ಟೆ ಬದಲಾಯಿಸಿದಂತೆ. ಮೊಬೈಲ್ ಕಂಪನಿಗಳೆಲ್ಲ ನನ್ನಿಂದಲೇ ಉಸಿರಾಡಿಕೊಂಡಿವೆಯೇನೋ ಅನಿಸುತ್ತೆ. ಅದೆಷ್ಟೋ ಸಿಮ್ ಗಳು ಬದಲಾದವು ಹುಡುಗರು ಬದಲಾದಂತೆ. ಅದೆಷ್ಟೋ ಸಿಮ್ ಗಳು ಮುರಿದುಹೋದವು ಪ್ರೀತಿ ಮುರಿದು ಹೋದಂತೆ. ಹಪಹಪಿಸುತ್ತಿರುತ್ತದೆ ಮನಸ್ಸು ಮತ್ತೊಬ್ಬ ಹುಡುಗನಿಗಾಗಿ ಅವನ ಮೇಲೆ ಸೇಡು ತೀರಿಸಿಕೊಳ್ಳಲು. ಸ್ವಲ್ಪ ಪ್ರೀತಿ ತೋರಿಸುವ , ಸ್ವಲ್ಪ ಕೇರ್ ಮಾಡುವ ಹುಡುಗ ಸಿಕ್ಕರೂ ಸಾಕು ಪ್ರೀತಿಯಾಗಿ ಬದಲಾಯಿಸಿಕೊಳ್ಳುತ್ತಿದ್ದೆ ನಾನು. ಮೊದಮೊದಲು ನನ್ನ ಬಗೆಗೆ ಗೆಳತಿಯರು, ಓರಗೆಯ ಹುಡುಗಿಯರೆಲ್ಲ ಆಡಿಕೊಳ್ಳುವಾಗ ತುಂಬಾ ಬೇಸರವಾಗುತ್ತಿತ್ತು. ಆಮೇಲಾಮೇಲೆ ಎಲ್ಲವೂ ಮಾಮೂಲಿ ಅನ್ನಿಸತೊಡಗಿತ್ತು. " ಈ ವಾರ ಯಾವ ಹುಡುಗನ ಬೈಕಿನ ಬ್ಯಾಕ್ ಸೀಟ್ ಮೇಲೆ ಹೆಸರಿದೆಯೇ ಹುಡುಗಿ ?" ಅಂತ ಕಣ್ಣರಳಿಸಿ ಯಾರಾದರೂ ಗೆಳತಿಯರು ಕೇಳಿದರೆ wait and watch ಎಂದು ಕಣ್ಣು ಹೊಡೆದು ಬರುತ್ತಿದ್ದೆ. ಅದೆಷ್ಟೋ ಅಪರಿಚಿತರು ಪರಿಚಿತರಾದರು. ಅದೆಷ್ಟೋ ನಿರ್ಜನ ಪ್ರದೇಶಗಳು ಆಪ್ತವಾದವು. ಊರೂರು ಸುತ್ತಿದೆ. ಮುಖವೇ ನೋಡಿರದೆ ಇದ್ದ ಯಾವುದೋ ಹುಡುಗನಿಗಾಗಿ ಅವನೂರಿನವರೆಗೆ ಅಲೆದೆ. ಸ್ನಾನದ ಮನೆಯ ಮಂದ ಬೆಳಕಿನಲ್ಲಿ ಮೈ ಮೇಲಿನ ಕಲೆಗಳನ್ನು ಎಣಿಸತೊಡಗಿದೆ. ಎಲ್ಲರಲ್ಲೂ ಅವನೇ ಕಾಣುತ್ತಿದ್ದ. ಗಾಯದ ಮೇಲೆ ಬರೆ ಎಳೆಯುವಂಥವರೇ ಸಿಕ್ಕರಾ ? ಅಥವಾ ನಾನೇ ಅಂಥವರನ್ನು ಹುಡುಕಿಕೊಂಡು ಹೊರಟೇನಾ ? ಗೊತ್ತಿಲ್ಲ. ಮನಸ್ಸೆಂಬ ಮಾಯಾ ಕುದುರೆ ಲಂಗು ಲಗಾಮಿಲ್ಲದೆ ಓಡುತ್ತಿತ್ತು . ಸಂಬಂಧಗಳನ್ನು ಉಳಿಸಿಕೊಳ್ಳುವ ಭರದಲ್ಲಿ ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತಿದ್ದೆ, ಅವು ಉಸಿರು ಕಟ್ಟಿ ಸತ್ತು ಹೋಗುತ್ತಿದ್ದವು. ಸಡಿಲ ಬಿಟ್ಟ ಸಂಬಂಧಗಳೆಲ್ಲ ಗಾಳಿಗೆ ಹರವಿ ಬಿಟ್ಟ ಕೂದಲುಗಳಂತೆ ಸಿಕ್ಕು ಸಿಕ್ಕು.. ಹಿಡಿತದ ಹದ ಕೊನೆಗೂ ಸಿಕ್ಕಿಲ್ಲ. ಅಪ್ಪ ಅಮ್ಮನಕಣ್ಣಲ್ಲಿ ವಿಲ್ಲನ್ ನಾನು. ಗೆಳತಿಯರ ಸರ್ಕಲ್ ನಲ್ಲಿ ಚೆಲ್ಲು .. ಸುತ್ತಲಿನವರ ದೃಷ್ಟಿಯಲ್ಲಿ ನಡತೆ ಸರಿಯಿಲ್ಲದ ಹುಡುಗಿ. ಮೊದಲು ಅಮ್ಮನ ಬೈಗುಳ , ಅಪ್ಪನ ನೋಟಗಳೆಲ್ಲ ಭಯ ಹುಟ್ಟಿಸುತ್ತಿದ್ದವು. ಈಗ ಅಪ್ಪ ಅಮ್ಮನ ಬುದ್ಧ್ಹಿಮಾತುಗಳನ್ನೂ ಕೇಳದ ಮಟ್ಟಕ್ಕೆ ಬೆಳೆದು ನಿಂತು ಬಿಟ್ಟೆ. ಈಗೀಗ ಅವರ ಮೌನ ಕೂಡಾ ನನ್ನಲ್ಲಿ ಭಯ ಹುಟ್ಟಿಸುವುದಿಲ್ಲ. ಅವರೆಲ್ಲರ ತಿರಸ್ಕಾರದ ನೋಟಗಳ ಮೆಟ್ಟಿ ನಿಲ್ಲಲು ಬೇಕು ಹುಡುಗನೊಬ್ಬನ ತೆಕ್ಕೆ.ಸಿಗುವ ಯಾರೋ ಒಬ್ಬನ ಜೊತೆ ಹ್ಯಾಂಗ್ ಔಟ್ .

ಮನೆಯಲ್ಲಿ ಮದುವೆ ಮಾಡಿ ಕೈ ತೊಳೆದುಕೊಳ್ಳುವ ತವಕ. ಯೋಗ್ಯ ವರನಿಗಾಗಿ ಹುಡುಕಾಟ. ಅಲ್ಯಾವುದೋ ಹುಡುಗನ ಜೊತೆ ಮದುವೆ ಮಾತುಕಥೆಗಳು ನಡೆಯುತ್ತಿದ್ದರೆ ನಾನಿಲ್ಯಾರದೋ ತೋಳತೆಕ್ಕೆಯಲ್ಲಿ ಬಂಧಿಯಾಗಿರುತ್ತೇನೆ. ರೂಪಕ್ಕೆ ಮರುಳಾದವ ಯಾರೋ ಒಬ್ಬ ನೋಡಲು ಬರುತ್ತಾನೆ. ಅವನ ಮುಂದೆ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ. ಮನೆಗೆ ಹೋಗಿ ಉತ್ತರ ತಿಳಿಸುತ್ತೇನೆ ಎನ್ನುವವರ ಉತ್ತರ ಏನಾಗಿರುತ್ತದೆ ಎಂಬುದು ನನಗೂ ಗೊತ್ತಿರುತ್ತದೆ ; ಅಪ್ಪ ಅಮ್ಮನಿಗೂ ಕೂಡ. ಆಗ ಮನೆ ಅಸಹನೀಯವಾಗಿರುತ್ತದೆ. ಮನೆಯಲ್ಲಿನ ನಿಶ್ಯಬ್ದ, ಮೌನದ ಪೊರೆಯೊಳಗಿನ ಅವರ ಸಿಟ್ಟು , ಅಸಮಾಧಾನದ ನಿಟ್ಟುಸಿರು ಎಲ್ಲವನ್ನೂ ಎದುರಿಸಲಾರದೆ ಕೋಣೆಯ ಕದವಿಕ್ಕಿ ಬಿಕ್ಕುತ್ತೇನೆ.ಮತ್ತೆ ಶುರುವಾಗುತ್ತದೆ ಮನೆಯಲ್ಲಿ ಹುಡುಕಾಟ ಯೋಗ್ಯ ವರನಿಗಾಗಿ, ನಾನೂ ಯಾರೋ ಒಬ್ಬನ ತೋಳಲ್ಲಿ ಬಂಧಿಯಾಗಿ , ಕತ್ತಿನ ಇಳಿಜಾರಲ್ಲಿ ಅವನಿಡುವ ಮುತ್ತುಗಳ ಎಣಿಸುತ್ತ ಕೂತಿರುತ್ತೇನೆ. ಅದ್ಯಾವುದೋ ದೂರದ ಗುಡ್ಡದ ಮರೆಯಲ್ಲಿ.. ಅದೊಂದು ಮುಸ್ಸಂಜೆಯಲ್ಲಿ .. 


                                                    -ಕನ್ನಿಕೆಯ ಡೈರಿಯ ಪುಟಗಳಿಂದ ....


(ಈ ಲೇಖನ ಮಾರ್ಚ್ ೨೨ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿತ್ತು )

Monday 25 August 2014

ಕಿಟಕಿಯ ಪಕ್ಕ ಕುಳಿತು ಕನಸು ನೇಯುವ ತವಕ ....




"ಏನೇ ಒಳ್ಳೆ ಕಾಲು ಸುಟ್ಟ ಬೆಕ್ಕಿನ ಥರ ಆ ಕಡೆಯಿಂದ ಈ ಕಡೆ .. ಈ ಕಡೆಯಿಂದ ಆ ಕಡೆ ಓಡಾಡ್ತಾ ಇದ್ದೀಯ ?" ಅಂತ ಅಣ್ಣ ಕೇಳಿದಾಗ " ಕೀರ್ತಿ ಗೆ ಮದ್ವೆ ಮಾಡ್ತಾರಂತೆ ಕಣೋ " ಅನ್ನೋ ಮಾತು ಅನಾಯಾಸವಾಗಿ ಬಾಯಿಂದ ಹೊರಬಂದಿತ್ತು . "ಅಯ್ಯೋ ಹಳ್ಳಕ್ಕೆ ಬೀಳೋನು ಅವನು.. ಹುಡುಕೋ ಕಷ್ಟ ಅವನ ಮನೆಯವರಿಗೆ .. ನಿಂದೇನು ಗಂಟು ಹೋಗೋದು ?" ಎಂದು ಅಣ್ಣ ಹುಬ್ಬು ಹಾರಿಸಿದಾಗ ಛೇ ನನ್ನ ಮಾತಲ್ಲಿನ ಅಸಹನೆ ಸ್ವಲ್ಪನಾದ್ರು ಇವನಿಗೆ ಗೊತ್ತಾಗಿದ್ರೆ ನನ್ನ ಮನಸ್ಸು ತಿಳಿಯುತ್ತಿತ್ತೇನೋ ಅನಿಸಿತ್ತು . "ಏನಿಲ್ಲಾ ಬಿಡು " ಅಂತ ಹೇಳಿ ರೂಮ್ ಗೆ ಬಂದೆ. ಯಾರದೋ ದೂರದ ಸಂಬಂಧಿಗಳ ಮದುವೆಯಲ್ಲಿ ಬಹಳ ಹತ್ತಿರದವನಾಗಿ ಪರಿಚಯ ಆದವನು ನೀನು. ಅದೇನೋ ಯಾರನ್ನು ಪರಿಚಯ ಮಾಡಿಕೊಂಡರೂ ಅನಾಯಾಸವಾಗಿ "ಅಣ್ಣ " ಎಂದು ಬಾಯಿಗೆ ಬರುತ್ತಿದ್ದ ಪದವೊಂದು ನಿನ್ನ ಪರಿಚಯವಾದಾಗ ಜಪ್ಪಯ್ಯ ಅಂದರೂ ಬರಲಿಲ್ಲ ..!!


ಪಯಣದಿಂದಲೇ ಪರಿಚಯ ಗಾಢವಾಗಿದ್ದು . ಅವತ್ತು ಹೆಸರಿಡದೆ ಶುರುವಾದ ನಿನ್ನೊಂದಿಗಿನ ಪಯಣವನ್ನು journey of love ಅಂತ ಹೇಳಲಾ ? journey of life ಅಂತ ಹೇಳಲಾ ? ಅಂತ ಇವತ್ತು confusion ನಲ್ಲಿ ಇದ್ದೀನಿ . ಅದ್ಯಾವುದೋ ಗುಡ್ಡದ ದೇವರ ಪೂಜೆಗೆ ಹೋಗಿ ವಾಪಸ್ ಬರುವಾಗ ನಿನ್ನೊಂದಿಗೆ ಬೈಕ್ ನಲ್ಲಿ ಬರುವಂತಾಗಿತ್ತು . ಒಂದೇ ದಿನದ ಒಡನಾಟದಲ್ಲಿ ಅಷ್ಟು ಪರಿಚಿತನಲ್ಲದ ನಿನಗಿಂತ ಅಣ್ಣ ನ ಜೊತೆ ಹೋಗುವುದೇ ಹಿತ ಎನಿಸಿ ಅಣ್ಣನೆಡೆಗೆ ನೋಡಿದರೆ ಮಾವನ ಮಗಳು ಪಲ್ಲವಿ ಆಗಲೇ ಅಣ್ಣನ ಬೈಕ್ ಏರಿಯಾಗಿತ್ತು . ಒಲ್ಲದ ಮನಸ್ಸಿನಿಂದಲೇ ನಿನ್ನ ಬೈಕ್ ನಲ್ಲಿ ಕುಳಿತಿದ್ದೆ . ಡೆಸ್ಟಿನೇಷನ್ ದೂರದ್ದಾದಾಗ ಮಾತಿರದ ಪಯಣ ಎಷ್ಟು ಹೊತ್ತು ? ಮೌನ ಪೊರೆ ಕಳಚಿ ಮಾತಿಗೆ ಜಾಗ ಕೊಟ್ಟಿತ್ತು. ಸದ್ದಿಲ್ಲದ ಆ ಕಾಡಿನ ಪರಿಸರದಲ್ಲಿ ನನ್ನದೊಂದೇ ಗದ್ದಲವೇನೋ ಎಂಬಂತೆ ಸಾವಿರ ಪ್ರಶ್ನೆಗಳನ್ನು ಕೇಳಿದ್ದೆ ನಿನ್ನ ಬಳಿ . ಎಲ್ಲದಕ್ಕೂ ತಾಳ್ಮೆಯಿಂದ ಉತ್ತರಿಸಿದ್ದೆ ನೀನು. ದಾರಿ ಮಧ್ಯದಲ್ಲಿ ಅದೆಲ್ಲೋ ಕವಲು ದಾರಿಯಲ್ಲಿ ನಿಲ್ಲಿಸಿ , "ಇಲ್ಲಿಂದ ಎಂಟು ಕಿಲೋಮೀಟರ್ ಹೋದರೆ ಡೆಡ್ ಎಂಡ್ ಲ್ಲಿ ನಮ್ಮನೆ ಇರೋದು" ಅಂತ ಮೈ ಮುರಿಯುತ್ತಾ ಹೇಳಿದಾಗ , ಬೈಕ್ ಲ್ಲಿ ಕೂತು ಬೋರಾದ ನನಗೂ ಇನ್ನೂ ಅಷ್ಟು ದೂರವಾ ?ಅನಿಸಿದ್ದು ಸುಳ್ಳಲ್ಲ . ಈ ನಡುವೆ ನನ್ನ ತೋಳುಗಳು ನಿನ್ನ ಕೊರಳು ಬಳಸಿದ್ದು , ಗಲ್ಲಕ್ಕೆ ನಿನ್ನ ಹೆಗಲು ಆಸರೆಯಾಗಿದ್ದು , ಹಾರಾಡುವ ಕೂದಲುಗಳು ಕೆನ್ನೆಯೊಂದಿಗೆ ಕಚಗುಳಿಯ ಆಟವಾಡಿದ್ದು ಯಾವ ಮಾಯದಲ್ಲಿ ನಡೆದಿತ್ತೋ ಗೊತ್ತಾಗಿರಲೇ ಇಲ್ಲ . ಬೈಕ್ ನಿಮ್ಮನೆ ಮುಂದೆ ನಿಂತಾಗ ಇಳಿದು ಮತ್ತೆ ಮದುವೆ ಮನೆ ಗದ್ದಲದಲ್ಲಿ ಸೇರಿ ಹೋಗುವಾಗ ಮಾತ್ರ ಡೆಡ್ ಎಂಡ್ ಗೆ ಬಂದು ನಿಂತ ಈ  ಪಯಣ, ಇಲ್ಲಿಂದಲೇ ಶುರುವಾಗಿ ಕಾಡಿನ ದಾರಿಗಳಲ್ಲಿ , ಕವಲುಗಳಲ್ಲಿ , ಆ ಹಾವಿನ ತಿರುವುಗಳಲ್ಲಿ ನಾವಿಬ್ಬರೂ ಕಳೆದು ಹೋಗಬೇಕಿತ್ತು ಅನಿಸಿದ್ದು ಸುಳ್ಳಲ್ಲ. ಏಕಾಂತ ಬೇಕಿತ್ತು ಮನಸ್ಸಿಗೆ ಈಗ , ಮೌನದ ಪೋರೆಯಲ್ಲಿ ಮತ್ತೆ ಸೇರಲು ಹವಣಿಸುತ್ತಿತ್ತು ಮನಸ್ಸು. ಅದರೂ ನಾವಿಬ್ಬರೂ ಗದ್ದಲದ ಸಂತೆಯಲ್ಲಿ ಕಳೆದುಹೋದೆವು .


ಪರಿಚಯದ ಹತ್ತು ತಿಂಗಳಲ್ಲಿ ಅದದೇ ಭಾವಗಳು ಮತ್ತೆ ಮತ್ತೆ ಕಾಡುವಾಗ ಇದಕ್ಕೆ ಪ್ರೀತಿಯಲ್ಲದೇ ಬೇರೇನು ಹೆಸರಿಡಲಿ ? " ಅಮ್ಮಾ ಕೀರ್ತಿ ಇದಾನಲ್ಲ " ಅಂತಾ ಶುರು ಮಾಡೋ ಹೊತ್ತಿಗೆ ಅಮ್ಮ " ಅದೇನೇ ಕೀರ್ತಿ ಅಂದ್ಕೊಂಡು ಕೀರ್ತಿ ಅಣ್ಣ ಅಂತ ಹೇಳೋಕೆ ಏನ್ ದೊಡ್ಡ ರೋಗ ನಿಂಗೆ ? "ಅಂತ ಕೇಳಿದರೆ  ಸಿಟ್ಟು ಬರುತ್ತೆ . ಇಷ್ಟೆಲ್ಲಾ ಕೇಳೋ ಅಮ್ಮನ ಕಣ್ಣಲ್ಲಿ ಒಂದು ಅನುಮಾನದ ಎಳೆ ಮೂಡಬಾರದ ? ನನ್ನನ್ನು ಕೇಳಬಾರದಾ ಅನಿಸುತ್ತೆ . ಅವಳಾಗೇ ಕೇಳಿದರೆ ಕೋಲೆ ಬಸವನ ಥರ ತಲೆ ಆಡಿಸುವುದೇ ಸುಲಭ , ತಡವರಿಸುತ್ತಾ ಮಾತುಗಳ ಪೋಣಿಸುವ ಬದಲು . ಅದಕ್ಕೆ ನಿನ್ನ ಕಾಗದ ಬಂದರೆ ಇನ್ನಿಲ್ಲದಂತೆ ಸಂಭ್ರಮಿಸುತ್ತೇನೆ . ಆದರೂ "ನಾನೇಕೆ ಹೀಗೆ?" ಅನ್ನೋ ಅನುಮಾನದ ಭೂತ ಮನೆಯಲ್ಲಿ ಯಾರ ಕಣ್ಣಲ್ಲೂ ಪ್ರತಿಫಲಿಸಲ್ಲ ಹಾಳಾದ್ದು . ನೀನೋ ಅಷ್ಟುದ್ದ ಪತ್ರವನ್ನು ಹಾಲ್ ಎಂಬೋ ಸಂತೆಯಲ್ಲಿ ಕೂತು ಓದುವಂತೆ ಬರೆದಿರುತ್ತೀಯ ವಿನಃ ರೂಮ್ ಎಂಬ ನನ್ನದೇ ಲೋಕದಲ್ಲಿ ಕದವಿಕ್ಕಿಕೊಂಡು ಕಿಟಕಿಯ ಪಕ್ಕ ಕುಳಿತು ಕನಸು ನೇಯುವಂತಹ ನಾಲ್ಕು ಸಾಲುಗಳನ್ನೂ ಬರೆಯುವುದಿಲ್ಲ ..


ನಿನಗೆ ರಾಖಿ ಕಳಿಸು ಅಂದ ಅಮ್ಮನಿಗೆ ಇನ್ನಿಲ್ಲದಂತೆ ನೆಪ ಹೇಳಿ ತಪ್ಪಿಸಿಕೊಂಡಿದ್ದೇನೆ . ರಕ್ಷಾ ಬಂಧನದ ಬದಲು ಭಾವ ಬಂಧನದ ಬಗೆಗೆ ಈ ನಾಲ್ಕು ಸಾಲುಗಳನ್ನು ನಿನಗಾಗಿ ಬರೆದೆ. ರಾಖಿ ಹಬ್ಬವಾಗಿ ವಾರದೊಳಗಾಗಿ ಈ ಪತ್ರ ಕೈ ಸೇರಿದಾಗ ಅಲ್ಲಿ ನಿನ್ನೆದೆಯಲ್ಲೆಲ್ಲೋ "ಒಳಗಡೆ ರಾಖಿಯಿರಬಹುದಾ ?" ಅಂತ ಒಂದು ಸಣ್ಣ ತಲ್ಲಣವಾದರೂ ಇಲ್ಲಿ ನನ್ನೆದೆ ಗೂಡೊಳಗೆ ಖುಷಿಯ ಕಲರವ...


ನಿನ್ನಿಂದ ಬರಬಹುದಾದ ಕಿಟಕಿಯ ಪಕ್ಕ ಕುಳಿತು ಕನಸು ನೇಯುವಂಥಹ ನಾಲ್ಕು ಸಾಲುಗಳ ನಿರೀಕ್ಷೆಯಲ್ಲಿ ...

Monday 28 July 2014

ನಿನಗೊಂದು ಹ್ಯಾಪಿ ಬರ್ತ್ ಡೇ




ನಿನ್ನೊಡನೆ ನೇರವಾಗಿ ಆಡದ , ಆಡಲಾಗದ ಮಾತುಗಳಿವೆ . 
ಎದುರು ನಿಂತು  ಆಡದ ಜಗಳಗಳಿವೆ . 
ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ನೀ ಕೊಟ್ಟ ಸಂಸ್ಕಾರ ದೊಡ್ಡದಿದೆ .. 

ಬಾಸುಂಡೆ ಬರುವಂತೆ ನಿನ್ನಿಂದ ಹೊಡೆತ ತಿಂದಿದ್ದಿದೆ . 
ದೊಡ್ದವರಾಗುವವರೆಗೂ ನಿನ್ನಿಂದ ಬೈಸಿಕೊಂಡಿದ್ದಿದೆ . 
ಆದರೆ ಅದೆಲ್ಲಕ್ಕಿಂತ ಮಿಗಿಲಾಗಿ ಅಂದು ನೀ ಕೊಟ್ಟ ಶಿಕ್ಷೆ ಇಂದು ಶಿಕ್ಷಣವಾಗಿದೆ ... 

ನೀ ತೆಗೆದುಕೊಂಡ ಕೆಲವು ಕಠಿಣ ನಿರ್ಧಾರಗಳಿಂದ ಚಿಕ್ಕ  ಬೇಸರವಾಗಿದೆ .
ಹೊಡೆತ ತಿಂದ ಮೇಲೂ ಅಳಲು ಬಿಡದ ನಿನ್ನ ಮೇಲೆ ಸಣ್ಣ ದ್ವೇಷವಿದೆ . 
ಆದರೆ ಇದೆಲ್ಲಕ್ಕೂ ಮಿಗಿಲಾಗಿ ನೀ ಕೊಟ್ಟ ಮತ್ತೂ ನಿನಗೆ ನಾವು ಕೊಡಲೇಬೇಕಾದ  ಹಿಮಾಲಯದಷ್ಟು ಪ್ರೀತಿಯಿದೆ .. 

ಇವತ್ತು ಅದೇ ಪ್ರೀತಿಯಿಂದ ನಿನಗೊಂದು ಹ್ಯಾಪಿ ಬರ್ತ್ ಡೇ ಅಪ್ಪಾ ... :)

Friday 4 July 2014

ಕ್ರಶ್ ...:)



ಆಗ ತಾನೆ ಬಟ್ಟೆ ಒಗೆದು ಬಂದು ಗೋಡೆಗೆ ಆನಿಕೊಂಡು ಕುಳಿತಿದ್ದಳು ಸ್ಮಿತಾ. ಕೈ ಲ್ಲಿ ಮೊಬೈಲ್ ಇತ್ತಾದರೂ ಎನೂ ಮಾಡದೆ ಕುಳಿತಿದ್ದಳು. ತನ್ನನ್ನು ಒಮ್ಮೆಯಾದರೂ ನೋಡಬಹುದೇನೋ ಎನ್ನುತ್ತಲೆ ಮೊಬೈಲ್ ಎರಡು ಬಾರಿ ಕೂಗಿತ್ತಾದರೂ ಅದರ ಕಡೆಗೆ ಲಕ್ಷ್ಯವಿರಲಿಲ್ಲ ಇವಳಿಗೆ. ಸ್ಮಿತಾ ಹೆಸರಿಗೆ ತಕ್ಕಂತೆ ನಗುವ ನಗಿಸುವ ಹುಡುಗಿ. ಅವಳಿಗಿಂತ ಮುಂಚೆ ನಗು ಮನೆಯೊಳಗೆ ಕಾಲಿಟ್ಟಿರುತ್ತದೆ. ಅಂಥ ಹುಡುಗಿಯ ಗಂಭೀರವದನ ಯಾಕೊ ಆಕೆಯ ಗೆಳತಿಯರಿಗೆ ಇಷ್ಟವಾಗಲಿಲ್ಲ. ಕೊರಳ ತಬ್ಬಿ ಧನ್ಯಾ ಕೇಳಿದಳು, " ಏನಾಯ್ತೆ ಪಾಪಚ್ಚೀ?"

" ಬಟ್ಟೆ ಒಣಹಾಕಿ ಬಂದ ಐದೇ ನಿಮಿಷಕ್ಕೆ ಮಳೆ ಬಂತಲ್ಲ , ಅದಕ್ಕೆ ಅಮ್ಮಾವ್ರಿಗೆ ಹೊಟ್ಟೆ ಉರಿತಿರಬೇಕು" ಎಂದು ಸಾಂಬಾರ್ ಗೆ ಉಪ್ಪು ಹಾಕುತ್ತಾ ಇಲ್ಲೊಂಚೂರು ಉಪ್ಪು ಸುರಿದಳು ಚಂದು.

ಒಂದು ನಿಟ್ಟುಸಿರಿನೊಂದಿಗೆ ಸ್ಮಿತಾಳ ಬಾಯಿಂದ ಬಂದ ಮಾತು "ಪವನ್ ನ ನೋಡಿದೆ ಕಣ್ರೆ , ಅವನ ವೈಫ್ ಜೊತೆ" ಇಷ್ಟೇ ಅಲ್ಲೊಂದು ಮೌನವೂ ಕೂಡಿಕೊಂಡು ಬಿಟ್ಟಿತ್ತು ಆ ಮೂವರ ನಡುವೆ.

ಈಗೊಂದು ಫ್ಲಾಶ್ ಬ್ಯಾಕ್ ಬೇಕಲ್ಲ.. ತಗೋಳಿ ..

ಈ ಮೂವರು ಹುಡುಗಿಯರು ಒಂದಾತ್ಮ ಮೂರು ಜೀವಾ ಅಂತ ಹೇಳದಿದ್ರೂ ಹಂಗೆ ಇದಾರೆ. ಒಂದೊಳ್ಳೆ residencial ಏರಿಯಾದಲ್ಲಿ ಒಂದು ಬಿಲ್ಡಿಂಗ್ ನ ನಾಲ್ಕನೇ ಫ್ಲೋರ್ ನಲ್ಲಿ ಇವರದೊಂದು ರೂಮು. ಹಗಲೆಲ್ಲ ಕೆಲಸ, ರಾತ್ರಿ ಸ್ವಲ್ಪ ಮಸ್ತಿ , ಕುಸ್ತಿ, ಗಲಾಟೆ ಜೀವನ ನಮ್ಮ ಹೆಣ್ಮಕ್ಕಳದ್ದು. ಅವರೊದ್ದೊಂದು ಪ್ರಪಂಚ, ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅಲ್ಲಾಗಿದ್ದು ಹೊರಗಡೆ ಹೋಗಲ್ಲ.. :) ಸೇರಿಯಸ್ನೆಸ್ ಅನ್ನೋದನ್ನ ಜೀವನದಲ್ಲಿ ಎಲ್ಲಿ ಬೇಕೋ ಅಲ್ಲೊಂದೆ ಉಪಯೋಗಿಸಿಕೊಂಡು, ಉಳಿದ ಟೈಮ್ ಲ್ಲಿ ಜೀವನಕ್ಕೆ ನಗೋದು ಕಲಿಸುತ್ತಾ ಬದುಕುವ ಸಿಂಪಲ್ ಲೈಫು ನಮ್ಮ ಹುಡುಗಿಯರದು. ಈ ಕ್ರಶ್ ಅನ್ನೊದು ಹೆಂಗೆ ಬೇಕಾದ್ರು ಆಗಬಹುದು. ಅದು ರೂಪದ ಮೇಲೆ ಮಾತ್ರ ಡಿಪೆಂಡ್ ಅಲ್ಲ ಎನ್ನುವುದು ಇವರ ವಾದ. ಈಗ ಧನ್ಯಾಗೆ ಅವಳ ಬಾಸ್ ಮೇಲೆ ಫ಼ುಲ್ ಲವ್ ಇದೆ. ಹಂಗಂತ ಅವನೇನು ಸುರಸುಂದರಾಂಗನೂ ಅಲ್ಲ. ಅವನಿಗೆ ಆಗಲೇ ಮೂವತ್ತರ ಮೇಲಾಗಿದೆ ವಯಸ್ಸು. ಅದು ಅವರ ನಾಲೇಡ್ಜ್ ಬಗ್ಗೆ ಅವಳಿಗಾದ ಕ್ರಶ್ಚ್ಯ್. ಹಾಗೆ ನಮ್ಮ ಚಂದನಾಗೂ ಪಕ್ಕದ ಸೆಕೆಂಡ್ ಫ಼್ಲೋರ್ ನ ಶ್ಯಾಮ್ ಕಂಡ್ರೆ ಇಷ್ಟ.ಹಂಗಂತ ಅವ್ಳು ಏನು ರೂಪಕ್ಕೆ ಮರುಳಾದವಳಲ್ಲ. ಅದು ಅವನ ಬಳಿ ಇರುವ ಯುನಿಕಾರ್ನ್ ಬೈಕ್ ಮತ್ತು ಸ್ವಲ್ಪ ಮಟ್ಟಿನ ಅವನ ಸ್ಟೈಲ್ ನಿಂದ ಬಂದಿದ್ದು. ಹಾಗೆ ಅವಳಿಗೆ ಆ ಕಾರ್ನರ್ ಮನೆಯ ತ್ರಿ-ಫ಼ೊರ್ಥ್ ಕೂಡಾ ಕೂಡಾ ಇಷ್ಟ. ಈ ತ್ರಿ-ಫೋರ್ಥ್ ಅಂದ್ರೆ ಆತನ ಹೆಸರು ಗೊತ್ತಿಲ್ಲ. ಅವನನ್ನು ನೋಡಿದ್ದೆಲ್ಲ ತ್ರಿ-ಫೋರ್ಥ್ ನಲ್ಲೆ. ಹಂಗಾಗಿ ಆ ಹೆಸರು. ಅವನು ಯಾಕಿಷ್ಟ ಅಂದ್ರೆ ಅದಕ್ಕೆ ಕಾರಣ ಅವನ ಬಳಿ ಇರೊ ಒಂದು ದೈತ್ಯಾಕಾರದ ಲ್ಯಾಬ್ರಡಾರ್ ನಾಯಿ. ಇನ್ನು ನಮ್ಮ ಕಥಾನಾಯಕಿ ವಿಶ್ಯಕ್ಕೆ ಬಂದ್ರೆ ಅವಳಿಗೂ ಎದುರು ಮನೆಯ ನಡೆದಾಡುವ ಲೈಬ್ರೆರಿ ಚಂದನ್, (ಯಾವಾಗಲೂ ಏನಾದರೂ ಓದುತ್ತಿರುತ್ತಾನೆಂದು ಅವನಿಗೆ ಆ ಹೆಸರು ಎಂದು ಬಿಡಿಸಿ ಹೇಳಬೇಕಾಗಿಲ್ಲ ತಾನೆ,) ಹಾಗೆ ಕೆಳಗಡೆಯ ಅಂಗಡಿ ಹುಡುಗ ಕಿರಣ್ ಇವರೆಲ್ಲ ಮೇಲೂ ಕ್ರಶ್ ಇದ್ದೇ ಇದೆ. ಇಲ್ಲಿ ಒಬ್ಬರಿಗೆ ಒಬ್ಬನ ಮೇಲೆ ಮಾತ್ರ ಕ್ರಶ್ ಆಗಬೇಕೆಂಬ ನಿಯಮವಿಲ್ಲ. ಇವರ ಪ್ರಕಾರ ಕ್ರಶ್ ಎಷ್ಟು ಜನರ ಮೇಲೂ ಯಾವಾಗ ಬೇಕಾದರೂ ಆಗಬಹುದು. ಮತ್ತೂ ಒಬ್ಬನ ಮೇಲೆ ಇಬ್ಬರಿಗೂ ಕ್ರಶ್ ಆಗಬಹುದು..!! ಅದಕ್ಕಾಗಿ ಜಗಳ ಕಾದಾಟಗಳೇಲ್ಲ ಇಲ್ಲ. ಈ ಎಲ್ಲ ವಿಷಯಗಳು ಅವರ ಹರಟೆಕಟ್ಟೆ ಹಾಟ್ ಸ್ಪಾಟ್ ಟೆರ್ರೆಸ್ ಮೇಲೆ ನಿತ್ಯ ಚರ್ಚಿತ.

ಹಾಗಂತ ನಮ್ಮ ಹುಡುಗಿರೇನು ಚೆಲ್ಲು ಚೆಲ್ಲು ಅಂದ್ಕೊಂಡ್ರೆ ತಪ್ಪಾಗಿ ಬಿಡುತ್ತೆ. ತುಂಬಾ ಡೀಸೆಂಟ್ ಹುಡುಗಿರು. ಊರಿಗೆ ಇವರಷ್ಟೇ ಪದ್ಮಾವತಿಯರಲ್ಲದಿದ್ದರೂ ಇವರನ್ನು ಮಾತನಾಡಿಸಲು ಪ್ರಯತ್ನ ಪಟ್ಟು ಸೋತವರ ಲಿಸ್ಟ್ ಉದ್ದದ್ದಿದೆ. ಮೇಲೆ ಹೇಳಿದ ಇವರೆಲ್ಲರ ಕ್ರಶ್ ಗಳ ಬಳಿಯೂ ಮಾತನಾಡಿದವರಲ್ಲ ಇವರುಗಳು. ಪಕ್ಕದ ಟೆರ್ರೆಸ್ ನ ಹುಡುಗರು ಏನಾದರೂ ಕೇಳಿದರೂ ಕೂಡಾ ಕೇಳಿದ್ದಷ್ಟಕ್ಕೆ ಬಿಗಿಯಾದ ಉತ್ತರದೊಂದಿಗೆ ಮಾತು ಮುಕ್ತಾಯ.

ಇಂತಿಪ್ಪ ನಮ್ಮ ಹುಡುಗಿಯರಿಗೊಬ್ಬ ಮಿಸ್ಟರ್ ಪರ್ಫೆಕ್ಟ್  ಇದ್ದ. ಆತನೆಂದರೆ ಮೂವರಿಗೂ ಇಷ್ಟ. ಅವನೆಂದರೆ ಮೂವರಿಗೂ "ನಮ್ಮೆಜಮಾನ್ರು".. :) ಆ ಹುಡುಗನ ಕೂಲ್ ಕೂಲ್ ಕಣ್ಣುಗಳು, ಆತನ ಬ್ಲ್ಯಾಕ್ ಹೊಂಡಾ ಕಾರು, ಬ್ರೌನ್ ಸ್ಪಾನಿಯಲ್ ಜಾತಿಯ ನಾಯಿ ಇವೆಲ್ಲದರಿಂದ ಅವನು ನಮ್ಮ ಹುಡುಗಿಯರಿಗೆ ಹಾಟ್ ಕೇಕ್. ಟೆರ್ರೆಸ್ ನ ಹರಟೆಯಲ್ಲಿ ಅವನನ್ನು ನೋಡುವುದು ಒಂದು ಭಾಗ. ಅದೊಂದು ದಿನ ಏದುಸಿರು ಬಿಡುತ್ತಾ ಬಂದ ಚಂದುವಿಗೆ ಎನಾಯ್ತೊ ಎಂದು ಉಳಿದಿಬ್ಬರು ತಲೆ ಕೆಡಿಸಿಕೊಂಡರೆ ಇವಳು ನಿಧಾನಕ್ಕೆ ನೀರು ಕುಡಿದು "ಅವನ ಹೆಸರು ಪವನ್ ಕಣ್ರಲೇ "ಎಂದಾಗ, ಎಲ್ಲರೂ ತಮ್ಮ ಹೆಸರುಗಳ ಮುಂದೆ ಪವನ್ ಎಂದು ಬರೆದು ಖುಷಿ ಪಟ್ಟಿದ್ದೆ ಪಟ್ಟಿದ್ದು. ಅವನ ಕಂಡರೆ ಆ ದಿನವೇನೊ ಖುಷಿ.. ಅವನು ಬೆಳಿಗ್ಗೆ ಆಫೀಸ್ ಹೊರಟರೆ ನಮ್ಮ ಹುಡುಗಿಯರೆಲ್ಲ ಒಂದೊಂದು ನೆಪದಲ್ಲಿ ಹೊರ ಹೋಗಿ ಅವನ ನೋಡಿ ಕೂಲ್ ಕೂಲ್ ಅನ್ನುತ್ತಾ ಬರುವುದು ದಿನಚರಿ. ಇನ್ನು ರಾತ್ರಿಯ ನಾಯಿ ಜೊತೆಯ ವಾಕಿಂಗ್ ಅಂತೂ ಅವನಿಗಿಂತ ಶ್ರದ್ದೆಯಿಂದ ಕಾಯುವವರು ಈ ಹುಡುಗಿಯರು. ಅವನೇನು ವಿಶ್ವಾಮಿತ್ರನೇನಲ್ಲ, ನಮ್ಮ ಹುಡುಗಿಯರು ನೋಡುವುದು ಅವನಿಗೂ ಗೊತ್ತು. ಅವನದು ಇವರ ಕಡೆಗೊಂದು ಕಳ್ಳ ನೋಟ ಇರುತ್ತಿತ್ತು. ಆದರೆ ನಗು ಮಾತ್ರ ಅದ್ಯಾಕೋ ಸ್ಮಿತಾಳಿಗೆ ಮಾತ್ರ ಮೀಸಲು. ಅವನು ಸ್ಮೈಲ್ ಕೊಟ್ಟಾ ಕಣ್ರೆ ಎನ್ನುತ್ತಾ ಸ್ಮಿತಾ ಬಂದರೆ ಉಳಿದಿಬ್ಬರಿಗೆ ಸ್ವಲ್ಪ ಹೊಟ್ಟೆ ಉರಿಯುತ್ತಿತ್ತು. ಹಿಂಗಿತ್ತು ಲೈಫು ಅಂದ್ಕೊಳೋ ಹೊತ್ತಿಗೆ ಒಂದು ದಿನ ಹಠಾತ್ತಾಗಿ ಹುಡುಗ ಗಾಯಬ್..!!! ಆಗಿನ ವಿರಹ ವೇದನೆಯನ್ನು ವಿವರಿಸಲು ಪದಗಳಿಲ್ಲ ಬಿಡಿ. ಹಂಗಾಗಿ ಆ ಪ್ರಯತ್ನಕ್ಕೆ ಹೋಗಲ್ಲ. ಇನ್ನು ತುಂಬಾ ಕ್ರಶ್ ಗಳಿದ್ದರೂ, ಹೊಸಬರೂ add ಆಗುತ್ತಿದ್ದರೂ ಪವನ್ ಮರೆಯಾಗಿರಲಿಲ್ಲ. ಅವನಿಗೊಂದು ಜಾಗ ಹಾರ್ಟ್ ಲ್ಲಿ, ಅವನಿಗಾಗಿ ಸ್ವಲ್ಪ ಟೈಮ್ ಹರಟೆಯಲ್ಲಿ ಇದ್ದೇ ಇತ್ತು. ಇಂತಿರುವಾಗ ಸುಮಾರು ಮೂರು ತಿಂಗಳ ನಂತರ ಅವನ ಮನೆ ಮುಂದೆ ಶಾಮಿಯಾನ , ತೋರಣಗಳನ್ನೂ ನೋಡಿದ ಹುಡುಗೀರಿಗೆ ಅಸೆ ಚಿಗುರಿದ್ದು ಪವನ್ ನೋಡಬಹುದೆಂದು. ಟೆರ್ರೆಸ್ ಮೇಲೆ ಉಟ ಮಾಡಿ ಶಬರಿಯರಂತೆ ಕಾದ ಇವರಿಗೆ ಶ್ರೀರಾಮ ದರ್ಶನವಾದದ್ದು ಮದುಮಗನಾಗಿ, ಸಾಕ್ಷಾತ್ ಸೀತಾಮಾತೆಯೊಂದಿಗೆ. ಅವನ ಮದುವೆ ಇವರೆಲ್ಲರಿಗೂ ಹೃದಯ ವಿದ್ರಾವಕ ಘಟನೆಯಂತೆ ಭಾಸವಾಗಿತ್ತು. ಅಂದಿನ ಹರಟೆ ಕಟ್ಟೆಯೂ ಮೌನವಾಗಿತ್ತು.

ನವ್ ಕಮ್ ಟು ದಿ ಪಾಯಿಂಟ್, ಅದು ನಡೆದು ಒಂದು ವಾರದ ಮೇಲೆ ಸ್ಮಿತಾ ನೋಡಿದ್ದು ಅದೇ ಪವನ್ ನ ಅವನ ಪತ್ನಿಯೊಂದಿಗೆ. ಹಾಗಾಗಿಯೇ ಮೌನ ಗೌರಿಯಂತೆ ಕುಳಿತಿದ್ದು. ಇದೇ ವಿಷ್ಯ ಉಳಿದವರಿಗೆ ಇಷ್ಟವಾಗಿರಲಿಲ್ಲ.

ಅದಕ್ಕೆ ಧನ್ಯಾ "ನೋಡೆ ಈ ಕ್ರಶ್ ನೆಲ್ಲ ಸಿರಿಯಸ್ ಆಗಿ ತಗೊಂಡು, ಮುಂದೆ ಲವ್ವು ಪವ್ವು ಅಂದ್ಕೊಂಡ್ರೆ ಜೀವನ ಹಾಳಾಗಿಹೋಗುತ್ತೆ. ನಡಿ ಪಕ್ಕದ ಗ್ರೀನ್ ಬಿಲ್ಡಿಂಗ್ ಗೆ ಹೊಸದಾಗಿ ಯಾರೋ ಬಾಡಿಗೆಗೆ ಬಂದಿದ್ದಾರಂತೆ ಚಂದು ಹೇಳ್ತಿದ್ಲು, ನೋಡ್ಕೊಂಡು ವಯಸ್ಸಿಗೊಂಚೂರು ಮರ್ಯಾದಿ ಇಡೋಣ "ಎನ್ನುತ್ತಾ ಟೆರ್ರೆಸ್ ಗೆ ಎಳೆದುಕೊಂಡು ಬಂದರೂ ಸ್ಮಿತಾಳ ಮನಸ್ಸ್ಯಾಕೋ ಹಿಂಬಾಗಿಲ ಕಿಟಕಿಯ ಕಡೆಗೇ ಎಳೆಯುತ್ತಿತ್ತು .

Tuesday 25 March 2014

ಕೊಂಡಿ ತಪ್ಪಿದ ಗೆಜ್ಜೆ ....

"ಅಯ್ಯೋ ಚುಕ್ಕಿ ತಪ್ಪಿತಲ್ಲೆ " ಅಂದೆ  ಪಾವನಿಗೆ. ಒರೆಸೋ ಬಟ್ಟೆ ತರಲು ಒಳಗೆ ಹೋದಳು ಮದುಮಗಳು. "ಏನೂ ಮಾಡೋದು ಹೇಳು ಸಾಲು ತಪ್ಪಿಸಿದವಳು ನೀನೆ. ಹಿರಿಯರ ಮಾತು ಕೇಳಿ ಮದುವೆಯಾಗಿದ್ದರೆ ಈಗ ನಿನ್ನ ಮದುವೆಯಾಗಬೇಕಿತ್ತು.  ತಂಗಿ ಮದುವೆಗೆ ಬರುವಂತಾಯಿತಲ್ಲೇ " ಎಂದ ಅಜ್ಜಿಯ ಮಾತುಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ, ಹೇಗೆ ಚುಕ್ಕಿ ತಪ್ಪಿದೆ ? ಅಂತ ಯೋಚಿಸತೊಡಗಿದ್ದೆ. ಮನಸ್ಸೆಲ್ಲ ನಿನ್ನ ಕಡೆಗೆ ಹರಿದಿತ್ತು. ಬದುಕ ದಿಕ್ಕನ್ನೇ ತಪ್ಪಿಸಿ ನಡೆದವನ ನೆನಪು ರಂಗೋಲಿಯ ಚುಕ್ಕಿ ತಪ್ಪಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ ಬಿಡು. ಅಜ್ಜಿ  ಹೊರಹಾಕಿದ್ದು ತನ್ನೊಳಗಿನ ನೋವನ್ನಾ? ಅಥವಾ  ಆಡಿದ್ದು ಕುಹಕವಾ ?  ಯೋಚಿಸುವ ಗೊಡವೆಗೆ ಹೋಗದೆ, ಕಣ್ಣಂಚಿನ ನೀರ ತಡೆದುಕೊಂಡು ರಂಗೋಲಿ  ಬಿಡಿಸಿ  ಬಂದಿದ್ದೆ. 

ಬೆಳೆದಿದ್ದು, ಓದಿದ್ದು , ಕೆಲಸ ಹಿಡಿದಿದ್ದು ಎಲ್ಲವೂ ಹೊರಗಡೆಯೇ ಆದ್ದರಿಂದ ನನಗೂ ಊರಿಗೂ ನೆಂಟಸ್ತನದ ನಂಟು. ಈಗಲೂ ಮನೆಗೆ ಬಂದರೆ ನೆಂಟರಂತೆ ನೋಡಿಕೊಳ್ಳುತ್ತಾರೆ, ಮನೆಯವಳಂತೆ ಅಲ್ಲ, ಅಥವಾ ಬಂದು ಹೋಗುವ ನಾಲ್ಕು ದಿನಗಳಲ್ಲಿ ನಾನೇ ಹಾಗಿರುತ್ತೇನೋ ಏನೋ. ಆದರೆ ಪಾವನಿ ಹಾಗಲ್ಲ. ಆಕೆ ಮೊದಲಿಂದಲೂ ಮನೆಗುಬ್ಬಿ. ಹಾಗಾಗಿ ಆಕೆ ಮನೆ ಮಗಳು. ಅವತ್ತು ಚಿಕ್ಕಮ್ಮ ಫೋನ್ ಮಾಡಿ "ಮಗಳೇ ಪಾವನಿಗೆ ಒಳ್ಳೆ ಕಡೆಯ ಸಂಬಂಧ ಕೂಡಿ ಬಂದಿದೆ. ಮದುವೆ ಮಾಡಬಹುದಾ ?" ಎಂದಾಗ ಸಂತೋಷದಿಂದಲೇ "ಇದ್ರಲ್ಲಿ ಕೇಳೋದೇನಿದೆ ಚಿಕ್ಕಮ್ಮ, ಮದುವೆ ಮಾಡಿ. ನಾನಂತೂ ಸಹಾಯ ಮಾಡ್ತೀನಿ " ಅಂತ ಹೇಳಿದ್ದೆ. ಆದರೆ ಚಿಕ್ಕಮ್ಮ ಅವರ ಮಗಳ ಮದುವೆ ನಿಶ್ಚಯಕ್ಕೆ ನನಗೇಕೆ importance  ಕೊಟ್ಟಿದ್ದು ಎಂಬುದು ಅರ್ಥವಾಗಿದ್ದು ಊರಿಗೆ ಬಂದಮೇಲೆಯೇ. "ಅಕ್ಕನ ಬಿಟ್ಟು ತಂಗಿಗೆ  ಮದುವೆ ಮಾಡ್ತಾರ ? " "ನಿಮ್ಮ ಮಗಳೇ ದೊಡ್ದವಳಲ್ಲವಾ ? ಅವಳ ಮದುವೆ  ಯಾವಾಗ ? " ಅಂತ ಎಲ್ಲರೂ  ಅಮ್ಮನನ್ನು ಕೇಳುವಾಗ, ಅಮ್ಮ ಮಾತನಾಡಲಾಗದೆ ತಡವರಿಸುವಾಗ ಕಷ್ಟವಾಗತೊಡಗಿತ್ತು. "ಅಲ್ಲವೇ ನೀ ಯಾವಾಗ ಮದುವೆಯಾಗೋದು ? ಓದು ,ಕೆಲಸ ಎಲ್ಲ ಆದಂತೆ ಆ ವಯಸ್ಸಿಗೆ ಮದುವೆಯೂ ಆಗಿಬಿಡಬೇಕು. ಯಾರನ್ನಾದರೂ ಪ್ರೀತಿಸಿದ್ದೀಯ ? ಅದೂ ಬೇರೆ ಜಾತಿಯವನನ್ನಾ ? " ಅಂತೆಲ್ಲ ಬಂಧುಗಳು ಕೇಳುವಾಗ, "ಯಾವ ಕೆಲಸಕ್ಕೂ ಮುಂದಾಗಿ ಹೋಗಬೇಡ, ಇಂಥ ಮಾತುಗಳನ್ನೆಲ್ಲ ಕೇಳಬೇಕಾಗುತ್ತದೆ " ಎಂದು ಅಮ್ಮ ಮರುಗುತ್ತಿದ್ದಾಗೆಲ್ಲ  " ಹೌದು ಪ್ರೀತಿಸಿದ್ದೆ, ಇವತ್ತು  ಅದೇ ಹುಡುಗ ನನ್ನ ತಂಗಿಯನ್ನೇ ಮದುವೆಯಾಗುತ್ತಿದ್ದಾನೆ. ತಂಗಿಯ  ರಟ್ಟೆ ಹಿಡಿದು ಎಬ್ಬಿಸಿ, ಅವನೆದುರು ಹಸೆಮಣೆಯಲ್ಲಿ ಕುಳಿತು ತಾಳಿ ಕಟ್ಟಿಸಿಕೊಳ್ಳಲಾ ? " ಎಂದು ಕೂಗಿ ಕೇಳುವ ಮನಸ್ಸಾಗುತ್ತಿತ್ತು. ಆದರೂ ತಡೆ ಹಿಡಿದಿದ್ದೆ. ಮಗಳೇ ಎನ್ನುವ ಚಿಕ್ಕಮ್ಮನ ಪ್ರೀತಿ. ಮದುವೆಯೆಂದು ಪಾವನಿಯ ಕಣ್ಣಲ್ಲಿನ ಹೊಳಪು, ನನ್ನನ್ನು ಕಟ್ಟಿ ಹಾಕಿದ್ದವು. 

ಅವತ್ತು ಪಾವನಿ " ನೋಡೇ ಅಕ್ಕಾ , ನನ್ನ ಹುಡುಗಾ  ಹೇಗಿದ್ದಾನೆ ಹೇಳು? " ಎಂದು ನಿನ್ನ ಫೋಟೋವನ್ನು ಕೈಲಿಟ್ಟಾಗ  ಎಚ್ಚರತಪ್ಪಿ ಬಿದಿದ್ದೆ. ಎಚ್ಚರ ಬಂದಾಗ " ಹೇಗಿದ್ದಾನೆ ಹೇಳು ? ಅಂದ್ರೆ ಎಚ್ಚರ ತಪ್ತಿಯಲ್ಲ " ಅಂತ ಪಾವನಿ ಕೆನ್ನೆಯುಬ್ಬಿಸಿದರೆ " ನಿನ್ನ ಹುಡುಗ ಎಚ್ಚರ ತಪ್ಪುವಂತೆ ಇದ್ದಾನೆ, ಜೋಪಾನವಾಗಿಟ್ಟುಕೋ " ಅಂತ ಕೆನ್ನೆ ಹಿಂಡಿ ಕಳಿಸಿದ್ದೆ ಅವಳನ್ನು. ಆಮೇಲೆ ಯಥಾ ಪ್ರಕಾರ ನಿನ್ನ  ಪ್ರೀತಿಸಿದ ನೆನಪುಗಳು.. ಎಲ್ಲ ಪ್ರೇಮ ಕಥೆಗಳಿಗಿಂತ ಭಿನ್ನವೇನಿಲ್ಲ. ಪ್ರೀತಿಯಿಂದ ನೀ ನುಣುಚಿಕೊಳ್ಳಲು ಕೊಟ್ಟ ಕಾರಣವೂ ಭಿನ್ನವೇನಲ್ಲ. ಯು ಕೆ ಗೆ ಹೋಗಿ  ಬಂದವ ಕಣ್ಣು ತಪ್ಪಿಸಿ ಓಡಾಡತೊಡಗಿದ್ದೆ. ನಿಲ್ಲಿಸಿ ಕೇಳಿದವಳಿಗೆ " ನೋಡು   ಅಲ್ಲಿ ಹೋಗಿ ಬಂದವನಿಗೆ ಕರಿಯರ್ ಎಷ್ಟು important  ಎಂದು ಅರ್ಥವಾಗಿದೆ. ಮತ್ತೆ ಮನೆಯಲ್ಲೂ  ಅಮ್ಮನಿಗೆ ತಾನೇ ನೋಡಿದ ಹುಡುಗಿಯನ್ನು ಮಗ ಮದುವೆಯಾಗಬೇಕು ಇದೆ. ಅವರ ಮಾತು ಮೀರುವುದು ಸಾದ್ಯವಿಲ್ಲ. ಕಾಲ ಮಿಂಚಿಲ್ಲ, ಜೀವನ ಇನ್ನೂ ಇದೆ.  ಬೇರೆಯಾಗಿ ಬದುಕೋಣ " ಅಂತ ತಾವರೆ ಎಲೆಯ ಮೇಲಿನ ನೀರ ಹನಿಯಂತೆ ಜಾರಿಕೊಂಡು ಬಿಟ್ಟಿದ್ದೆ. ನೀ ಕೊಟ್ಟ ಪುಟಾಣಿ ಮಗುವಿನ ಕಾಲುಗೆಜ್ಜೆಯೊಂದು ನನ್ನ ಬಳಿಯಿತ್ತು. ಇನ್ನೊಂದು ಬಹುಶಃ ನಿನ್ನ ಬಳಿಯೇ ಇತ್ತೋ ಏನೋ. ಕಾಲಿಗೆ ಹಾಕಲು ಬಾರದ ಅದನ್ನು ಬಳೆಯಂತೆ  ನನ್ನ ಕೈಗೆ ಹಾಕಿಕೊಂಡು ಖುಷಿ ಪಡುತ್ತಿದ್ದೆ ಯಾವಾಗಲೂ... 

ನಿನ್ನ ಮದುವೆಯ ದಿನ  ಕೂಡ ಅದೇ ಗೆಜ್ಜೆಯನ್ನು ಕೈ ಗೆ ಹಾಕಿಕೊಂಡಿದ್ದೆ. " ಇದೇನೆ  ಕಾಲು ಗೆಜ್ಜೆನಾ ಕೈಗೆ ಹಾಕಿಕೊಂಡಿದ್ದೀಯ ಮ್ಯಾಚ್ ಆಗ್ತಿಲ್ಲ " ಅಂತ ಯಾರೇ ಹೇಳಿದರೂ ತೆಗೆಯುವ ಮನಸ್ಸಾಗಿರಲಿಲ್ಲ. " ಮದುವೆ ಗಂಡಿಗೆ ದೃಷ್ಟಿ ಬೊಟ್ಟು ಇಡಬೇಕಂತೆ. ಚೂರು ಸಹಾಯ ಮಾಡ್ತೀರ ? " ಅಂತ ನಿನ್ನ ಗೆಳೆಯ ನನ್ನನ್ನೇ ಕೇಳಿಕೊಂಡು ಬಂದಿದ್ದ. ಅದೇ  ಗೆಜ್ಜೆ ಹಾಕಿಕೊಂಡ ಕೈಯಲ್ಲೇ  ನಿನಗೊಂದು ದೃಷ್ಟಿ ಬೊಟ್ಟಿಟ್ಟು ನಕ್ಕಿದ್ದೆ.  " ಒಂದು ಸಹಾಯ ಮಾಡ್ತೀಯ ? ದಯವಿಟ್ಟು ತಾಳಿ ಕಟ್ಟುವಾಗ ಎದುರು ಕುಳಿತಿರಬೇಡ, ನಂಗೆ ಕಸಿವಿಯಾಗುತ್ತೆ, ಪಾಪಪ್ರಜ್ಞೆ ಕಾಡುತ್ತೆ " ಅಂತ ನನ್ನೆದುರು ಪಿಸುಗುಟ್ಟಿದ್ದೆ ಅಲ್ಲವಾ ? ತಾಳಿ ಕಟ್ಟುವಾಗ ಎದುರಿನಲ್ಲೇ ಇದ್ದೇನಲ್ಲ ನಾನು. ಒಂದು ಗಂಟು, ಉಹೂನ್ ಎರಡನೇ ಗಂಟು ಹಾಕುವಾಗಲೂ ನಿನ್ನ ಕಣ್ಣಲ್ಲಿ ಯಾವುದೇ ಕಸಿವಿಸಿ ಇರಲಿಲ್ಲ, ಯಾವ ಪಾಪಪ್ರಜ್ಞೆಯೂ ಇರಲಿಲ್ಲ ..!! ಪಾಪಪ್ರಜ್ಞೆ  ಕಾಡಿದ್ದು ನನಗೆ, ಪಾಪಿಯೇನಿಸಿಕೊಂಡಿದ್ದು  ನಾನು.. ಅಲ್ಲಿರಲಾರದೆ  ಓಡಿ ಬಂದು ದೇವಸ್ಥಾನದ ಮುಂದಿನ ಕಲ್ಯಾಣಿಯ ಪೌಳಿಯ ಮೇಲೆ ಕುಳಿತಿದ್ದೆ. ಗೆಜ್ಜೆಯನ್ನು ಬೀಸಿ ನೀರಿಗೆಸೆಯುವ ಮನಸ್ಸಾಗಿತ್ತು. ಆದರೆ ನೀರು ನನ್ನನ್ನೇ ಕರೆಯುವಂತೆ ಭಾಸವಾಗುತ್ತಿತ್ತು. ನಿಧಾನವಾಗಿ ಒಂದೊಂದೇ ಮೆಟ್ಟಿಲಿಳಿಯ ತೊಡಗಿದ್ದೆ. ನೀರೂ ಮೇಲೇರುತ್ತಿತ್ತು. ನೀರೊಳಗಿನ ಐದನೆಯದೋ ಆರನೆಯದೋ ಮೆಟ್ಟಿಲಲ್ಲಿದ್ದಾಗ ಗೆಜ್ಜೆಯ ಕೊಂಡಿ ತಪ್ಪಿತ್ತು. ಕೈಯಿಂದ ಜಾರಿ ನೀರೊಳಗೆ ಬೀಳುತ್ತಿದ್ದ ಗೆಜ್ಜೆ ಹಿಡಿಯಲು  ಬಾಗಿದ್ದೆ, ಕಾಲು  ತಪ್ಪಿತ್ತು.  "ಅವನಿ ಅಲ್ಲಿ ಯಾಕಮ್ಮ ಹೋದೆ ? ವಾಪಸ್ ಬಾ . ಅಯ್ಯೋ  ಮುಳುಗುತ್ತಿದ್ದಾಳೆ, ಈಜು  ಬರುತ್ತೆ ನಿನಗೆ ಕಾಲು  ಬಡಿಯೇ "  ಎಂದೆಲ್ಲ  ಮನೆಯವರೆಲ್ಲ ಹೇಳುತ್ತಿದುದು ಕ್ಷೀಣವಾಗುತ್ತ  ಕೊನೆಗೊಮ್ಮೆ  ನಿಂತೇ ಹೋಯಿತು. 
***********************************************************************
ಬೆಳಕಿಗೆ ಕಣ್ಣ ಹೊಂದಿಸಿಕೊಂಡು ಸುತ್ತ ನೋಡಿದೆ.  ಆಸ್ಪತ್ರೆಯ ವಾತಾವರಣ ಎಂದು ಗೊತ್ತಾಗಲು ಬಹಳ ಸಮಯ ಹಿಡಿಯಲಿಲ್ಲ. "ಮನೆಯಲ್ಲಿನ ಮದುವೆ ಹೇಗೆ ಆಯ್ತೋ,ಹೇಗೆ ಹೋಯ್ತೋ  ಗೊತ್ತಿಲ್ಲ. ಅಲ್ಲಿ ನೀರ  ಹತ್ತಿರ ಯಾಕೆ ಹೋಗಬೇಕಿತ್ತು. ಅಂತೂ ಕಣ್ಣು ಬಿಟ್ಟೆಯಲ್ಲ ತಾಯಿ" ಅಂತಾ ಅಜ್ಜಿ ಸಮಾಧಾನ ಮಾಡಿಕೊಳ್ಳುತ್ತಿದ್ದಾಳೆ.  ಸಾವ ಬಯಸಿ ಹೊರಟವಳನ್ನು ಬದುಕು ಪ್ರೀತಿಸತೊಡಗಿತ್ತು. ಬದುಕಿಸಿಕೊಂಡಿದೆ. ಸಾವ ಕದ ತಟ್ಟಿ ಬಂದವಳಿಗೆ ಬದುಕಿನ ಮೇಲೆ ಅಪರಿಮಿತವಾಗಿ ಪ್ರೀತಿ ಹುಟ್ಟಿದೆ. " ಹುಡುಗಾ ನಿನ್ನನ್ನೂ, ಪಾವನಿಯನ್ನು ಒಂದು ದಿನ ಮನೆಗೆ ಕರೆಯುತ್ತೇನೆ.  ತಪ್ಪದೇ ಬನ್ನಿ. ಹಾಂ  ನಮ್ಮ ಮನೆಗೆ ಬರಲು ನೀನೇನೂ ಮುಜುಗರ ಪಟ್ಟುಕೊಳ್ಳಬೇಕಾಗಿಲ್ಲ. ತಾಂಬೂಲ, ಹಣ್ಣುಗಳನ್ನು ನಿಮ್ಮ ಮುಂದೆ ಇಟ್ಟಂತೆ ಹಳೆಯ ಪ್ರೀತಿಯನ್ನು ಸಹ  ಪಕ್ಕದಲ್ಲಿ ಕರೆದು ಕೂರಿಸಿಕೊಳ್ಳುವುದಿಲ್ಲ. ಯಾಕೆಂದರೆ ಕೊಂಡಿ ತಪ್ಪಿ ಕಲ್ಯಾಣಿಯ ತಳ ಸೇರಿದ ಗೆಜ್ಜೆ ಮತ್ತೆಂದೂ ಸದ್ದು ಮಾಡುವುದಿಲ್ಲ...   

Saturday 22 February 2014

’ಪಕ್ಕದಲ್ಲೇ ಮಲಗಿದ್ದರೆ, ಕನಸಿಗೆ ಬರಬಾರದೆ?’

ಎದೆಯಂಗಳದಿ  ನಿನ್ನ 
ನೆನಪ ಕೊಳವ 
ಕದಡುವ ಶಕ್ತಿ ಇರುವುದು 
ಹೊರಗಡೆ ಸುರಿವ 
ತುಂತುರು ಮಳೆಗೆ ಮಾತ್ರ ... 

ಸಣ್ಣ ಸೋನೆ ಮಳೆ ನಿನ್ನ ನೆನಪ ದೀಪ ಹಚ್ಚುತ್ತದೆ. ಮೋಡದ ಮರೆಯ ರಾಜಕುಮಾರ ನೀನು. ಮೋಡ ನೋಡಲು ಹೋಗುತ್ತೇನೆಂದು ಅಮ್ಮನಿಗೆ ಹೇಳಿ ಊರಂಚಿನ ಗುಡ್ಡದಲ್ಲಿ ನಿನ್ನ ಭೇಟಿಯಾದ ದಿನಗಳು ಮತ್ತೆ ಬರಲಾರವಲ್ಲ. ಮುಗಿಲ ಮಾರಿಗ ರಾಗ ರತಿಯಾ ನಂಜ ಏರಿತ್ತ...  ಎಂದು ನಾ ಹಾಡುವಾಗ ನನ್ನ ಮಡಿಲಲ್ಲಿ ಮಲಗಿ ನೀ ನನ್ನ ಕಿವಿ   ಜುಮುಕಿಯೊಂದಿಗೆ ಆಡಿದ ದಿನಗಳು ನೆನಪುಗಳಲ್ಲಿ ಸೇರಿ ಹೋಗಿವೆ. ಯಾವುದೋ ಪರಿಸ್ಥಿತಿಯ ನೆಪ ಹೇಳಿ ನೀ ನನ್ನ ತೊರೆದು ಹೋದಾಗ ಪ್ರೀತಿ ಬೂದಿಯಾಗಿತ್ತು. ತೊರೆದು ಹೋಗದಿರು ಜೋಗಿ .. ಎಂದು ಕೊನೆಯ ಬಾರಿ ನಿನ್ನಹೆಗಲು ತಬ್ಬಿ   ಹಾಡಿದ ಗಂಟಲು ಮೌನವಾಗಿದೆ. ದಿಬ್ಬದಂಚಲ್ಲಿ ನಿಂತರೆ ಮೋಡಗಳು ನಿನ್ನ ಸುದ್ದಿ ಹೇಳುವುದಿಲ್ಲ. ಇತ್ತೀಚಿಗೆ ಎಡವದಂತೆ ನಡೆಯುವುದನ್ನು ಕಲಿತಿದ್ದೇನೆ. ಎಡವಿದರೆ ಕೈ ಹಿಡಿಯಲು ನೀನಿಲ್ಲವಲ್ಲ. ಮೊನ್ನೆ ಮಳೆಯಲ್ಲಿ ನೆನೆಯುತ್ತಿದ್ದಾಗಲೂ ಊಹುಮ್  ನಿನ್ನ ನೆನಪಾಗಲೇ ಇಲ್ಲ. ಬಹುಶಃ ನೀ ಬದಲಾದಂತೆ ಇತ್ತೀಚಿಗೆ  ನಾನೂ ಬದಲಾದಂತಿದೆ. ಬತ್ತಿ ಹೋದ ನಿನ್ನ ನೆನಪುಗಳು ನನ್ನನ್ನು ಗಟ್ಟಿಗೊಳಿಸಿದಂತಿದೆ. 

ಇಷ್ಟು ಬರೆದು ಅವನಾಡಿದ ಜುಮುಕಿ ಮತ್ತು  ಮುಗಿಲ ಮಾರಿಗ ರಾಗ ರತಿಯಾ  ಹಾಡು ಬರೆದ ಹಾಳೆಯನ್ನು ಎಂದೋ ಮುಚ್ಚಿಟ್ಟಿದ್ದೆ. ಆದರೆ ಅದನ್ನು ನೀನು ಓದಿದ್ದೆ ಎಂಬುದನ್ನು ನೀನೇ ಮಡಚಿಟ್ಟ ಹಾಳೆಯ ಮಡಿಕೆಗಳು ಹೇಳುತ್ತಿದ್ದವು. "ಹೆಣ್ಣು ಪ್ರೀತಿಯ ವಿಷಯದಲ್ಲಿ ಸತ್ಯ ಹೇಳಬೇಕಂತೆ. ಗಂಡು ಸುಳ್ಳು ಹೇಳಬೇಕಂತೆ " ಅಂತ ಎಲ್ಲೋ ಕೇಳಿದ್ದೆ. ಹೇಳಿರದ ಸತ್ಯವೊಂದು ನಿನಗೆ ಗೊತ್ತಾಗಿತ್ತು. ತಪ್ಪು ಮಾಡಿಬಿಟ್ಟೆ ಅಂತ ಅನಿಸಲೇ ಇಲ್ಲ. ಸತ್ಯ,ಸುಳ್ಳನ್ನು ಮೀರಿದ ಒಂದು ನಂಬಿಕೆ ಕೈ ಹಿಡಿದಿತ್ತು. ಅವತ್ತಿನ ರಾತ್ರಿಯೇ ಅನ್ನಿಸಿತ್ತು ನಾಳೆ ಎಲ್ಲವೂ ಮೊದಲಿನಂತೆ ಇರುವುದಿಲ್ಲ ಎಂದು. 

ಮರುದಿನದ ಬೆಳಗು ಬದಲಾಗಿತ್ತು. ನೀನೂ  ಬದಲಾಗಿಬಿಟ್ಟಿದ್ದೆ. ಅದೆಷ್ಟು ಪ್ರೀತಿಸತೊಡಗಿಬಿಟ್ಟೆ ಆ ಹುಡುಗನೊಂದಿಗೆ ಜಿದ್ದಿಗೆ ಬಿದ್ದವನಂತೆ. ನನಗೆ,ನನ್ನ ಹಾಡುಗಳಿಗೆ ಮತ್ತೆ ಜೀವಕೊಟ್ಟೆ. ಮುಂಜಾನೆಯ , ಮದ್ಯಾಹ್ನದ , ಮುಸ್ಸಂಜೆಯ ರಾಗಗಳನ್ನು ಪೀಡಿಸಿ ಪೀಡಿಸಿ ರೆಕಾರ್ಡ್ ಮಾಡಿಸಿಕೊಂಡೆ. ಅದೆಷ್ಟೋ ರಾಗಗಳು ಸರಿರಾತ್ರಿಗಳಲ್ಲಿ ಸರಿದು ಹೋದವು. ಪಿಸುಮಾತುಗಳಾದವು. ಅದೆಷ್ಟೋ ಹಾಡುಗಳನ್ನು ನಿನಗಾಗಿಯೇ ಕಲಿತು ಹಾಡಿದೆ. ನನ್ನೊಳಗೊಂದು ಸಂಗೀತ ಬದುಕಾಗಿ ಜೀವತಳೆದು ನಿನ್ನ ಹೆಸರಿಟ್ಟುಕೊಂಡು ಬಿಟ್ಟಿತ್ತು. ನನಗೆ ನೀನಾಗುತ್ತಾ ಹೋದೆ.  ನನ್ನೊಳಗೊಂದಾಗುತ್ತಾ ಹೋದೆ. 

ಬೆಳಿಗ್ಗೆ ಎದ್ದರೆ ಬೆರಳ ತುದಿಯ 
ನೆನಪು ನೀನು ... 
ಕಣ್ಣುಮುಚ್ಚಿದರೆ  ರೆಪ್ಪೆಯಂಚಿನ 
ಕನಸು ನೀನು .. 
ಎದೆ ಬಾಗಿಲ ರಂಗವಲ್ಲಿ ನೀನು .. 
ಸೆರಗ ತುದಿಯ ನಾಚಿಕೆಯ 
ಚಿತ್ತಾರ ನೀನು ... 
ನೀನು ಮನದ ಮುಗಿಲ ತುಂಬಾ 
ಬರೀ ನೀನು ... 

ನಿನಗೆ ಸತ್ಯ ಗೊತ್ತಾದ ನಿರಾಳತೆಗೋ ಏನೋ ಆ ಹುಡುಗ ಕನಸಿಗೆ ಬರುವುದನ್ನು ನಿಲ್ಲಿಸಿಬಿಟ್ಟ ..!!  ಮನಸ ಕಾಡುವುದನ್ನೂ ...  ಅಲ್ಲೆಲ್ಲಾ ನೀನೇ ಆವರಿಸಿಕೊಳ್ಳುತ್ತಾ ಹೋದೆ. ಹೌದು ! ಮತ್ತೆ ಪ್ರೀತಿಯಾಗಿತ್ತು ನನಗೆ. ಮತ್ತೊಂದು ಹೊಸ ಕನಸು.. 

ಪ್ರೀತಿಯೆಂದರೆ ಏನೆಲ್ಲಾ .. 
ಪ್ರೀತಿಯೆಂದರೆ ಏನೂ ಇಲ್ಲಾ .. 
ಪ್ರೀತಿಯೊಳಗಡೆ ಏನಿಲ್ಲಾ .. 
ಪ್ರೀತಿಯಿಂದಲೇ ಎಲ್ಲಾ .. 
ಈ ಪ್ರೀತಿಗೆ ಹುಡುಕಿದಷ್ಟೂ 
ಹೊಸ ಅರ್ಥಗಳಲ್ಲ ... 

ಹೌದು ಹೊಸ ಹೊಸ ಅರ್ಥಗಳು ಪ್ರೀತಿಗೆ. ಬದುಕಲ್ಲಿ ಪ್ರೀತಿ ಒಮ್ಮೆ ಮಾತ್ರ ಆಗುತ್ತದೆ ಎಂಬುದು ಸುಳ್ಳಾ ? ಗೊತ್ತಿಲ್ಲ. ನಾನಂತೂ ಮತ್ತೆ ಘಾಡವಾಗಿ ಪ್ರೀತಿಸತೊಡಗಿದ್ದೆ. ಮನುಷ್ಯ ತಾನು ಕೊನೆವರೆಗೂ ಉಳಿಸಿಕೊಂಡಿದ್ದಕ್ಕೆ ಮಾತ್ರ ಪ್ರೀತಿ ಎಂದು ಹೆಸರಿಟ್ಟುಕೊಳ್ಳುತ್ತಾನೆ. ಅರ್ಧಕ್ಕೆ ಸತ್ತವುಗಳಿಗೆಲ್ಲ ತನ್ನ ದೌರ್ಬಲ್ಯ ದಾಟುವುದಕ್ಕಾಗಿ attraction, infatuation, one side love, wrong choice ಎಂಬೆಲ್ಲ ಹೆಸರಿಟ್ಟುಕೊಳ್ಳುತ್ತಾನೆ ಎನಿಸುತ್ತದೆ. ಅಮರ ಪ್ರೆಮಿಗಳೆನಿಸಿಕೊಂಡವರೆಲ್ಲ ಒಟ್ಟಿಗೆ ಸತ್ತರು.ಅದಕ್ಕಾಗಿಯೇ ಅವರ ಪ್ರೀತಿಗೆ "ಅಮರ ಪ್ರೀತಿ " ಎಂದು ಹೆಸರಾಯಿತೇನೋ. ಅವರಲ್ಲೂ ಒಬ್ಬರು ಸತ್ತು ಇನ್ನೊಬ್ಬರುಳಿದಿದ್ದರೆ ಆ ಪ್ರೀತಿ ಕೂಡ ,ಮೇಲಿನ ಯಾವುದಾದರೂ ಹೆಸರಿಟ್ಟುಕೊಂಡು ಸತ್ತು ಹೋಗುತ್ತಿತ್ತೇನೋ. ಪ್ರೀತಿಯ ಬಗೆಗೆ ಏನೇ ಗೊಂದಲಗಳಿದ್ದರೂ ನನಗಂತೂ ಮತ್ತೆ ಪ್ರೀತಿಯಾಗಿದೆ. ನಾನು ಸುಖಿ. ಉಳಿಸಿಕೊಳ್ಳಲಾಗದ ಕಾರಣಕ್ಕೆ ಹಳೆಯ ಪ್ರೀತಿಗೆ ಬೇರೇನೋ ಹೆಸರು ಕೊಡಲು ನಾನು ಸಿದ್ದಳಿಲ್ಲ. ಅವನೊಂದಿಗಿನ ಪಯಣಕ್ಕೋ , ಅವನಿಂದ ನಿನ್ನೆಡೆಗಿನ ಪಯಣಕ್ಕೋ ಹೆಸರು ಕೊಡುವ ಅಥವಾ ಹೆಸರಿಡುವ ಯಾವ ವ್ಯವಧಾನವೂ ಈಗ ಇಲ್ಲ ನನ್ನಲ್ಲಿ. ಈಗಿರುವುದು ನಿನ್ನ ಪ್ರೀತಿ ಮಾತ್ರ. ಆ ಪ್ರೀತಿ ಹೆಸರು ಬೇಡುತ್ತಿಲ್ಲ.

ನನ್ನೊಳಗಿನ ನಿನ್ನ  ಪ್ರೀತಿಯನ್ನು ಉಳಿಸಿಕೊಳ್ಳಬೇಕಿದೆ. ಅತ್ತೆ ಮಾವರಿಗೆ ಕಾಣದಂತೆ ಅಡುಗೆ ಮನೆಯಲ್ಲಿ ನಿನಗೆ ಕದ್ದು ಕೊಡುವ ಮುತ್ತಲ್ಲಿನ ಪ್ರೀತಿ.. ಮುತ್ತಿನ ಲೆಕ್ಕ ತಪ್ಪಿದೆ ಎಂದು ಜಗಳ ಆಡುವ ಹುಸಿಮುನಿಸಲ್ಲಿನ ಪ್ರೀತಿ...  ನೀ  ಆಫೀಸ್ ಗೆ ಹೊರಡುವ ಮುನ್ನ , 

ನೀ ಬರುವ ದಾರಿಯಲ್ಲಿ 
ಹಗಲು ತಂಪಾಗಿ ... 
ಬೇಲಿಗಳ ಸಾಲಿನಲ್ಲಿ 
ಹಸುರು ಕೆಂಪಾಗಿ .. 
ಪಯಣ ಮುಗಿಯುವ ತನಕ .. 
ಎಳೆಬಿಸಿಲ ಮಣಿಕನಕ 
ಸಾಲು ಮರಗಳ ಮೇಲೆ 
ಸೊಬಗ ಸುರಿದಿರಲಿ .. 

ಎಂಬ ಕೆ ಎಸ್ ಏನ್ ಕವನ ಗೀಚಿದ ಹಾಳೆಯನ್ನು ನಿನ್ನ ಕಿಸೆಯಲ್ಲಿಟ್ಟು, ನಿನ್ನೆದೆಗೆ ಒರಗಿ I Love You ಎಂದುಸುರುವ ಪ್ರೀತಿ. ಆಫೀಸ್ ನಿಂದ ಬಂದು fresh  up  ಆಗಲು ಕೋಣೆಗೆ ಹೋಗುವ ಮುನ್ನ "ನೀನೊಮ್ಮೆ ಬಾರೆ " ಎಂದು ಕಣ್ಣಲ್ಲೇ ಕರೆಯುವ ಆ ನಿನ್ನ ಪ್ರೀತಿ ಈ ಎಲ್ಲವನ್ನೂ ಹೀಗೆ ಹೀಗೆ ಉಳಿಸಿಕೊಳ್ಳಬೇಕಿದೆ. ಅಂದ ಹಾಗೆ ಹುಡುಗಾ ಇತ್ತೀಚೀಗೆ ಕನಸಿಗೆ ಬರುವುದನ್ನೇಕೇ ನಿಲ್ಲಿಸಿದ್ದೀಯಾ ?

ಪಕ್ಕದಲ್ಲೇ ಮಲಗಿರುತ್ತೀಯ 
ಎಂದ ಮಾತ್ರಕ್ಕೆ 
ಕನಸಿಗೆ ಬರಲು ನಿನಗೇಕೆ ಮುನಿಸು ? 
ಕನಸಲ್ಲೂ ನಿನ್ನ ಜೋತೆಗಿರಬೇಕೆಂಬ .. 
ಕನಸಲ್ಲೂ ನಿನ್ನ ಕಳೆದುಕೊಳ್ಳಲೊಲ್ಲದ..  
ಹಠಮಾರಿ ಮಗು ನನ್ನ ಮನಸ್ಸು ... 


(೧೪-೦೨-೨೦೧೪ ರ ಅವಧಿಯಲ್ಲಿ ಪ್ರಕಟವಾಗಿತ್ತು. Thank you  ಅವಧಿ ..) 

Tuesday 28 January 2014

ದೇವಯಾನಿ...



ನಿನ್ನದೇ ಚಿತ್ರ ತೂಗು ಹಾಕಿದ ಹೃದಯದ ತೀರಾ ಒಳಕೋಣೆಗೆ  ಕದವಿಕ್ಕಿ ಬರುತ್ತೇನಾದರೂ ಬೀಗ ಹಾಕಲು ಯಾಕೋ ಮನಸ್ಸಾಗುವುದಿಲ್ಲ. ಯಾಕೆಂದರೆ ನಿನ್ನ ನೆನಪುಗಳು ಬಂದಾಗ ಬೀಗ ತೆಗೆಯುವಷ್ಟೂ ತಾಳ್ಮೆಯಿರುವುದಿಲ್ಲ ನನ್ನಲ್ಲಿ. ಅಷ್ಟು ಧಾವಂತದಲ್ಲಿರುತ್ತೇನೆ ನಿನ್ನ ಮುಂದೆ ಮಂಡಿಯೂರಲು. ನೀನೊಂಥರ "ಗೆಳೆಯಾ ಎಂದರೆ ಅದಕೂ ಹತ್ತಿರ .. ಇನಿಯಾ ಎಂದರೆ ಅದಕೂ ಎತ್ತರ" .. ನಿನ್ನನ್ನು ಸಂಬೋಧಿಸಲು ಶಬ್ದಗಳಿಲ್ಲ, ಹಾಗಾಗಿ ಸಂಬಂಧಕ್ಕೊಂದು ಹೆಸರಿಡದೆಯೇ ಹಾಗೆ ಇದೆ.

ನಿನ್ನ ಪರಿಚಯ ಆಕಸ್ಮಿಕವೇನಲ್ಲ. ಕ್ಲಾಸ್ ಮೇಟ್ ಗಳಾಗಿದ್ದವರು ನಾವು. ಆದರೆ ಖಂಡಿತ ನಿನ್ನ ಮುಖ ಪರಿಚಯವಿರಲಿಲ್ಲ, ಯಾಕೆಂದರೆ ನೀ ಕ್ಲಾಸ್ ಕಡೆ ಮುಖ ಹಾಕಿದವನೇ ಅಲ್ಲವಲ್ಲ.  ಅವತ್ತೊಂದಿನ  ಯಾವುದೋ ಕಾದಂಬರಿ ಓದುತ್ತಾ ಕುಳಿತವಳ ಬಳಿ ಬಂದವನು, ನಾನು "ಪಿಆರ್" , ಶ್ರೀ ಮತ್ತು ಜಾನು ನಿನ್ನ ಬಗ್ಗೆ ಹೇಳ್ತಾ ಇರ್ತಾರೆ, ಅಂತ ಎದುರು ಬಂದಿದ್ದೆ. ನಿನ್ನ ಬಗ್ಗೆ ನನಗೂ ಕೇಳಿ ಗೊತ್ತಿತ್ತು ಆದ್ದರಿಂದ ನಾನು .. ಎಂದು ಶುರು ಮಾಡುವ ಮೊದಲೇ ನೀನೇ " ದೇವಯಾನಿ " ಎಂದಿದ್ದೆ. ನನ್ನ ಹೆಸರು ಅದಲ್ಲ ಎಂದವಳಿಗೆ  " ನಿನ್ನ ಕಿವಿ ಜುಮುಕಿ , ಕೆನ್ನೆ ತಾಕುವ ಕೂದಲುಗಳಿವೆಯಲ್ಲ ತುಂಬಾ ಇಷ್ಟವಾಯ್ತು ನಂಗೆ, ಅದ್ಯಾಕೋ ಯಯಾತಿಯಲ್ಲಿನ ದೇವಯಾನಿ ನೆನಪಾದಳು. ಇನ್ನೊಂದು ಏನು ಗೊತ್ತಾ ನನ್ನಮ್ಮನ ಹೆಸರು ಬಿಟ್ಟರೆ ಜಗತ್ತಿನಲ್ಲಿ ನಾನಿಷ್ಟ ಪಟ್ಟ ಇನ್ನೊಂದು ಹೆಸರು ದೇವಯಾನಿ. ನಿನ್ನ ನಿಜ ಹೆಸರು ಗೊತ್ತಿದ್ದರೂ ನಾ ನಿನಗೆ ದೇವಯಾನಿ ಎಂದೇ ಕರೆಯುತ್ತೇನೆ" ಎಂದಿದ್ದೆ. ಅವತ್ತಿನಿಂದ ನಿನಗೆ ನಾ ದೇವಯಾನಿಯೇ ಆಗಿದ್ದೆ. ಆದರೆ ನಾವಿಬ್ಬರೇ ಇದ್ದಾಗ ಮತ್ತು ಮೆಸೇಜ್ ಗಳಲ್ಲಿ ಮಾತ್ರ ನೀ ಹಾಗೆ ಕರೆಯುತ್ತಿದುದು. ಎಲ್ಲರೆದುರು ಎಲ್ಲರಂತೆ ನಿನಗೂ "ಚಂದು " ನಾನು. ಆಮೇಲೆ ಜಾನು , ಶ್ರೀ, ನಾನು , ರಾಘು, ವಸು, ನೀನು, ಪ್ರವಿ ಎಲ್ಲ ಒಂದು ಗ್ರೂಪ್ ಆಗಿಬಿಟ್ಟಿದ್ವಿ. ಕಾಲೇಜ್ ಕಾರಿಡಾರ್ ನಲ್ಲಿ ಕಾಣದೇ ಇದ್ದ ನೀವೆಲ್ಲ ಕಾಲೇಜ್ ಗೆ ಬರುತ್ತಿದ್ದೀರಿ. " ಮಗಾ ಎಗ್ಸಾಮ್ ಮಾತ್ರ ಅಟೆಂಡ್ ಮಾಡ್ತಾ ಇದ್ದ ನೀನು ಈಗೇನೋ ಇಷ್ಟೊಂದು ಕಾಲೇಜ್ ಕಡೆ ಬರ್ತೀಯ " ಅಂತಾ ರಾಘು ಕೇಳಿದರೆ "ದೇವಯಾನಿಗಾಗಿ " ಅಂತ ನೀ ತಣ್ಣಗೆ ಉತ್ತರಿಸಿದ್ದರೆ ಹಾವು ತುಳಿದಂತಾಗಿತ್ತು ನಂಗೆ. ಗಾಬರಿಯಲ್ಲಿ ನಿನ್ನ ಕಡೆ ನೋಡಿದರೆ ನಿನ್ನ ತುಂಟ ಕಣ್ಣುಗಳು ನನ್ನ ನೋಡಿ ನಗುತ್ತಿದ್ದವು. ನಮ್ಮನೆಲ್ಲ ನಿಮ್ಮ ಮನೆಗೆ ಕರೆದುಕೊಂಡು ಹೋದಾಗಲೂ ಅಷ್ಟೇ, ಎಲ್ಲರನ್ನೂ ನೀನೇ ಪರಿಚಯಿಸಿದ್ದರೂ, ನಿನ್ನಮ್ಮ ನನ್ನ ನೋಡಿದವರೇ ಚಂದು ಅಲ್ವಾ  ಗೊತ್ತು ಬಿಡು ಅಂದಾಗ  ಗಾಬರಿಯಾಗಿತ್ತು ನಂಗೆ. ನೀ ಎಲ್ಲರಿಗೂ ಮನೆ ತೋರಿಸುತ್ತಿದ್ದರೆ ನಿಮ್ಮಮ್ಮ ನನ್ನನ್ನು ಅವರ ಕೋಣೆಗೆ ಕರೆದೊಯ್ದಿದ್ದರು. ಅಲ್ಲಿ ಗೋಡೆಗಿದ್ದ ನನ್ನದೇ ದೊಡ್ಡ  ಫೋಟೋ ನಗುತ್ತಾ ನನ್ನನ್ನು ಸ್ವಾಗತಿಸಿದರೆ ವಿಸ್ಮಿತಳಾಗಿದ್ದೆ ನಾನು. ಅದು ಯಾವಾಗ ತೆಗೆದಿದ್ದು ಎಂದು ನಾನು ಯೋಚಿಸುತ್ತಿದ್ದರೆ ನಿಮ್ಮಮ್ಮ  " ನನ್ನ ಮಗ ಇಷ್ಟ ಪಟ್ಟ ಹುಡುಗಿ ನೀನು , ನೀವಿಬ್ಬರೂ ಸೇರುವ ದಾರಿಯೇ ದೂರವಿದೆ, ಸೇರಿದ ಮೇಲೆಯೂ ನಡೆವ ದಾರಿ ಇನ್ನೂ ದೂರದ್ದು. ಸಂಯಮವಿರಲಿ, ಎಚ್ಚರವಿರಲಿ" ಎಂದರು.  ನಿನ್ನಮ್ಮನ ಮಾತಿನಲ್ಲಿ ಪ್ರೀತಿಯ ಜೊತೆಗೆ ಎಚ್ಚರಿಕೆಯೂ ಇತ್ತು. 

ನೀನು ಯಾವತ್ತೂ ನೀನಾಗೆ ಪ್ರೀತಿ ಎಂದು ಬಂದವನಲ್ಲ. ನೀನಾಗಿಯೇ ಯಾವತ್ತೂ  ಪ್ರೀತಿಯನ್ನೂ ಹೇಳಿಕೊಳ್ಳಲೂ ಇಲ್ಲ. ಏಕಾಂತದಲ್ಲಿ ಮಾತಿಗೆ ಕರೆಯಲಿಲ್ಲ. ಏಕಾಂತದಲ್ಲಿ ಸಿಕ್ಕಾಗಲೂ ಕಾಡಲೂ ಇಲ್ಲ. ಶಟಲ್ ಆಡುವಾಗ ಎಲ್ಲರೆದುರೇ ದೇವಯಾನಿಯ ಬಗೆಗೆ ಕನಸುಗಳ ತೆರೆದಿಡುವಾಗ ಮನಸ್ಸೆಂಬೋ  ನವಿಲು ಗರಿ ಬಿಚ್ಚಿ ಕುಣಿಯುತ್ತಿತ್ತು. ಆದರೆ ತೋರಿಸಿಕೊಳ್ಳುವಂತಿರಲಿಲ್ಲ. ಪ್ರೀತಿ , ಪ್ರತಿಷ್ಠೆಯ ನಡುವಿನ ಜೂಜಾಟದಲ್ಲಿ ಪ್ರೀತಿಗೆ ಸೋಲು ಎಂಬುದು ಚೆನ್ನಾಗಿ ಗೊತ್ತಿತ್ತು ನನಗೆ. ನನಗಿಂತಲೂ ಗಟ್ಟಿಯಾದ  ಕನಸುಗಳು ನಿನಗಿದ್ದಾಗ ಅದನ್ನೆಲ್ಲ ಹಾಳು ಮಾಡುವ ಮನಸ್ಸಿರಲಿಲ್ಲ. ಅದಕ್ಕಾಗಿ  ಉತ್ತರದ ವಿಷಯದಲ್ಲಿ ನಾ ಮೌನಿಯಾಗಿದ್ದೆ. ನೀನು ಕೂಡ ಎಂದಿಗೂ ಉತ್ತರ ಕೊಡು ಎನ್ನುವಂತೆ ನನ್ನ ಕೇಳಿರಲೇ ಇಲ್ಲ. ಕಾಲೇಜ್ ಮುಗಿಯಿತು.  ಹೈಯರ್ ಸ್ಟಡಿಸ್ ಗಾಗಿ ಡೆಲ್ಲಿಗೆ ಹೋಗುವಾಗ ಮಾತ್ರ ನೀ ನನ್ನ ಕೇಳಿದ್ದೆ " ಏನು ಯೋಚಿಸಿದ್ದೀಯ ?" ಎಂದು. ಆ ಮುಸ್ಸಂಜೆಯಲ್ಲಿ ಸುಮ್ಮನೆ ನಿನ್ನ ಕೈ ಅದುಮಿ ಬಸ್ಸಿಂದ ಇಳಿದು ಬಂದವಳಲ್ಲಿ ಯಾವ ಭಾವನೆಗಳಿದ್ದವೋ ಇಂದಿಗೂ ಗೊತ್ತಿಲ್ಲ. ಅದನ್ನು ನೀನೇನೆಂದು ಅರ್ಥೈಸಿಕೊಂಡೆಯೋ ಅದೂ ಗೊತ್ತಿಲ್ಲ. ನಾನು ನನ್ನದೇ ಆದ ಹುಡುಕಾಟಗಳಲ್ಲಿ ಕಳೆದು ಹೋದರೆ ನೀ ನಿನ್ನ ಕನಸುಗಳಲ್ಲಿ ಕಳೆದು ಹೋದೆ. ಅದೆಷ್ಟೋ ತಿಂಗಳುಗಳು ಮಾತುಗಳಿಲ್ಲದೆ ಕಳೆದುಹೋಗಿದ್ದವು. ಅಪರೂಪಕ್ಕೆಲ್ಲೋ  ಮಾಡುವ ಕಾಲ್ ನಲ್ಲೂ ಕೂಡಾ ನಮ್ಮ ನಮ್ಮ ಕೆಲಸ , ಓದಿನ ಬಗ್ಗೆ ಮಾತುಗಳಿರುತ್ತಿದ್ದವು. ಈ ಹುಡುಗ "ದೇವಯಾನಿ" ಯನ್ನು ಮರೆತಿದ್ದಾನೆ ಎಂದುಕೊಂಡಿದ್ದೆ. ಆದರೆ ಕೊನೇ ಭೇಟಿಯಲ್ಲಿ ನೀನು " ಇನ್ನೊಂದೇ ಹೆಜ್ಜೆ ಕಣೆ ಗುರಿಗೆ, ಆಮೇಲೆ ಬಂದು ನನ್ನ ದೇವಯಾನಿಯನ್ನು ಕರೆದುಕೊಂಡು ಹೋಗುತ್ತೇನೆ " ಎಂದಾಗ ಅದೆಂಥ ಹುಚ್ಚು ಪ್ರೀತಿಯೋ ಹುಡುಗಾ ನಿನ್ನದು ಎನಿಸಿತ್ತು. ಆದರೆ ವಿಧಿ ಬೇರೆಯದಿತ್ತು ಬಿಡು. ವಾಪಸ್ ಹೋದವನು accident ಗೆ ಬಲಿಯಾಗಿದ್ದೆ. ಬರುತ್ತೇನೆ ಎಂದು ಹೇಳಿ ಹೋದವನು ಮರಳಿ ಬಾರದ ಲೋಕಕ್ಕೆ ಹೋಗಿದ್ದೆ. ಸೇರುವ ಮೊದಲೇ ದಾರಿ  ಮುರಿದು ಬಿದ್ದಿತ್ತು.  



ನಿನ್ನ ಸಾವಿನ ಸುದ್ದಿಯನ್ನು ಕೇಳಿದವಳು, ಅಮೇಲೇನನ್ನೂ ಯಾರ ಬಳಿಯೂ ಕೇಳಿಲ್ಲ. ನಿನ್ನ ಸಾವನ್ನು ಒಪ್ಪಿಕೊಳ್ಳಲು ಆಗಲೇ ಇಲ್ಲ ನನ್ನಿಂದ.  ಜಾನು , ಶ್ರೀ,ರಾಘು, ವಸು, ಪ್ರವಿ ನಿನ್ನ ನೆನಪು ಮಾಡಿಕೊಳ್ಳುತ್ತಾರೆ. ಆಗೆಲ್ಲ ನನಗೆ ಅಪರಾಧಿ ಪ್ರಜ್ಞೆ ಕಾಡುತ್ತೆ. ಆಗಲೇ ಒಪ್ಪಿಕೊಂಡು ಬಿಡಬೇಕಿತ್ತಾ ಎನಿಸುತ್ತದೆ. ಒಂದು ವೇಳೆ ಒಪ್ಪಿಕೊಂಡಿದ್ದರೆ ಇವತ್ತಿಗೆ ನನ್ನ ಬದುಕು ಏನಾಗುತ್ತಿತ್ತು ಎಂದು ಯೋಚನೆ ಬಂದರೆ ಸ್ವಾರ್ಥಿಯಾಗುತ್ತೇನೆ ನಾನು ಎನಿಸುತ್ತೆ. ಆದರೆ ಒಪ್ಪಿಕೊಂಡರೂ ಒಪ್ಪಿಕೊಳ್ಳದಿದ್ದರೂ ಅದು ವಾಸ್ತವ. ಮೊನ್ನೆ ನಿಮ್ಮ ಮನೆಗೆ ಹೋಗಿದ್ದೆ. " ಮುಕ್ತಾ ಮೇಡಂ ಮನೆ ಖಾಲಿ ಮಾಡಿದ್ದಾರಂತೆ, ಅಲ್ಲಿ ಬೇರೆ ಯಾರೋ ಬಾಡಿಗೆಗಿದ್ದಾರಂತೆ " ಅಂತ ವಸು ಹೇಳಿದ್ದರೂ ಆ ಮನೆಯ ಬಾಗಿಲು ಬಡಿದಿದ್ದೆ. ನಿಮ್ಮಮ್ಮನೆ ಬಾಗಿಲು ತೆಗೆದಾಗ ಖುಷಿಯಾಯ್ತು. ಅವತ್ತಿನದೇ ಪ್ರೀತಿಯಲ್ಲಿ ಬರಮಾಡಿಕೊಂಡರು. ನಿನ್ನ ಬಾಸ್ಕೆಟ್ ಬಾಲ್, ಸ್ಕೇಟಿಂಗ್ ಷೂಸ್, ಬುಕ್ಸ್ , ಬ್ಯಾಗ್ ಎಲ್ಲವು ಅದರದರದೇ ಸ್ಥಾನಗಳಲ್ಲಿದ್ದವು. ಗೋಡೆಯಲ್ಲಿ ನನ್ನ ಫೋಟೋ ಹಾಗೆಯೇ ನಗುತ್ತಿತ್ತು. ಅದರ ಎದುರಿನ ಗೋಡೆಯಲ್ಲಿ ನಿನ್ನ ಮೂರು ಫೋಟೋಗಳು ನನ್ನನ್ನು ನೋಡುತ್ತಿರುವಂತೆ.  ಅಲ್ಲಿ ನೋಡಿದವರಿಗೆ ನೀನಿಲ್ಲ ಎಂದು ಅನಿಸಲು ಸಾದ್ಯವೇ ಇರಲಿಲ್ಲ. ಅಲ್ಲಿ ನಿನ್ನ ಅಸ್ತಿತ್ವ  ನಿರಂತರ ಅನಿಸಿತು. ನಾವು ಮಾತನಾಡಿದೆವು ಎನ್ನುವುದಕ್ಕಿಂತ ತುಂಬಾ ಹೊತ್ತು ಮೌನದಿಂದ ಇದ್ದೆವು ಅಂದರೆ ಸರಿ ಆಗುತ್ತೆ. ಹೊರಡುವ ಮುಂಚೆ ನನ್ನ ಫೋಟೋ ತೋರಿಸಿ ನಿನ್ನ ಅಮ್ಮನನ್ನು ಕೇಳಿದೆ "ಈ ಫೋಟೋ ತೆಗೆದುಕೊಂಡು ಹೋಗಲಾ? ನಾನು"  ಅಂತ. ಅದಕ್ಕೆ ಅವರು ನಿನ್ನ ಫೋಟೋಗಳನ್ನು ತೋರಿಸಿ "ಆ ಫೋಟೋಗಳಲ್ಲಿ ಬೇಕಾದರೆ ಒಂದನ್ನು ತೆಗೆದುಕೋ. ಈ ಫೋಟೋ ನನ್ನ ಸೋಸೆಯದು, ಕೊಡೋಲ್ಲ " ಎಂದರು. ಓಡಿ ಹೋಗಿ ನಿಮ್ಮಮ್ಮನನ್ನು ತಬ್ಬಿಕೊಂಡೆ. ಅವರೂ ನನ್ನನ್ನು ಬಿಗಿಯಾಗಿ ತಬ್ಬಿಕೊಂಡರು. ಆ ಅಪ್ಪುಗೆಯಲ್ಲಿ ಬಹಳ ಮಾತುಗಳಿದ್ದವು. ಕೆಲವಷ್ಟು ಅರ್ಥವಾದವು, ಕೆಲವು ಆಗಲಿಲ್ಲ. ಅದರಲ್ಲಿ ನಿನಗೆ ಹೇಳಬೇಕಾಗಿದ್ದ ಮಾತುಗಳೆಷ್ಟಿದ್ದವೋ ???    

******************************************************************
ಸಂಭ್ರಮದ  ಎರಡು ವಸಂತಗಳು ಸಂಧ್ಯೆಯಂಗಳದಲ್ಲಿ ... 
ಎಲ್ಲರ ಪ್ರೀತಿಗೆ ಋಣಿ ... 

ಪ್ರೀತಿಯಿಂದ ....  ಸಂಧ್ಯೆ .... 

        

Tuesday 7 January 2014

ಬೆಳ್ಳಿತಾರೆ ....


ಥತ್ ಈ ಟ್ರಾಫಿಕ್ ದಾಟಿ ಆ ಕಡೆಯ ಆಫೀಸ್ ಹೋಗಬೇಕೆಂದರೆ ಹಿಂಸೆ ಅನ್ನುತ್ತಾ ರಸ್ತೆ ದಾಟಲೋ ಬೇಡವೋ ಅಂತ ನೋಡುತ್ತಿದ್ದೆ. ಅಷ್ಟರಲ್ಲಾಗಲೇ ಎರಡೋ ಮೂರೋ ಆಟೋದವರು  ಎದುರು ತಂದು ನಿಲ್ಲಿಸಿ ಬರುತ್ತೀನಾ ? ಎಂಬಂತೆ ಮುಖ ನೋಡಿದ್ದರು. ನಾವೇ ಕರೆದರೆ ಬರೋಲ್ಲ ಅನ್ನೋರು ರಸ್ತೆ ದಾಟೋವಾಗ ಅಡ್ಡ ಬರ್ತಾರಪ್ಪ ಅಂತ ಬೈಕೊತಿದ್ದೆ. ಅದೆಲ್ಲಿಂದ ಬಂದನೋ ಈ ಹುಡುಗ. ನಾ ನೋಡುತ್ತಿದ್ದಂತೆ ನನ್ನ ಕೈ ಹಿಡಿದು ಎಳೆದುಕೊಂಡು ರಸ್ತೆ ದಾಟಿಸಿಬಿಟ್ಟ .. !! ಬಾಯಿಗೆ ಬಂದಂತೆ ಬಯ್ಯ ಬೇಕೆಂದುಕೊಂಡವಳಿಗೆ ಬರುತ್ತಿದ್ದ ಏದುಸುರಿಗೆ ಮಾತನಾಡಲು ಆಗುತ್ತಿರಲಿಲ್ಲ. ಆತನೇ ಕೇಳಿದ "ನಿಮ್ಮನ್ನ ಡೈಲಿ ಬಸ್ಸಲ್ಲಿ ನೋಡುತ್ತೇನೆ, ಇಲ್ಲೇ ಹತ್ರ ಎಲ್ಲಾದ್ರು ವರ್ಕ್ ಮಾಡ್ತೀರಾ ? " ಹೌದು ಎಂಬಂತೆ ತಲೆಯಾಡಿಸಿದೆ. " ನನ್ನದು ಇಲ್ಲಿಯೇ ಕಾಲೇಜ್. ಇಬ್ಬರೂ ದಿನಾ ಒಂದೇ ಸ್ಟಾಪ್ ಲ್ಲೇ ಬಸ್ ಹತ್ತೋದು. ಬನ್ನಿ ಹೋಗೋಣ" ಅಂದ. ಕುಶಲವೇ ಕ್ಷೇಮವೇ ಎಲ್ಲ ವಿನಿಮಯವಾದಂತೆಲ್ಲ ಬಸ್ ಇಳಿದು ಆಫೀಸ್ ಗೆ ಹೋಗುವ ಒಂದೈದು ನಿಮಿಷದ ದಾರಿಗೆ ಆ ಹುಡುಗ ಗೆಳೆಯನಾದ. ನನ್ನ ಆಫೀಸ್ ಮತ್ತು ಅವನ ಕಾಲೇಜ್ ಗೆ ಕವಲೊಡೆಯುವ ದಾರಿಯವರೆಗೂ ಆತ ಜೊತೆ ನನಗೆ. ಇಬ್ಬರೂ ಒಂದೇ ಸ್ಟಾಪ್ ನಲ್ಲೆ ಹತ್ತುತ್ತೇವೆ ಆದರೂ ಹತ್ತುವ ಜಾಗದಲ್ಲಿ, ಬಸ್ಸಿನಲ್ಲೆಲ್ಲ ತೀರ ಅಪರಿಚಿತರಂತೆ ಇರುವ ನಾವು ಆಫೀಸ್ ದಾರಿಯಲ್ಲಿ ಮಾತ್ರ ಹುಟ್ಟಾಪರಿಚಿತರಂತೆ .. !! 

ಒಂದೊಂದು ದಿನ ಬೇಗ ಬಸ್ ಹೋದರೆ ಅಲ್ಲೇ ರಸ್ತೆ ಪಕ್ಕದ ಕಟ್ಟೆ ಮೇಲೆ ಕುಳಿತು ಒಂದೇ ಇಯರ್ ಫೋನ್ ನ ಇಬ್ಬರೂ ಕಿವಿಗೆ ಸಿಕ್ಕಿಸಿಕೊಂಡು ಎಫ್ ಎಮ್ ಕೇಳುವ ಮಜವೇ ಬೇರೆ. "ಅದೇನೂ ಬೀಟ್ ಸಾಂಗ್ ಅಂತಾ ಸಾಯ್ತೀಯ ಇರು ಕನ್ನಡ ಕೇಳೋಣ" ಅಂದ್ರೆ " ಲೇ ಸುಮ್ನೆ ಇರೆ, ರಚನಾ ಅಂತೆ, ಸ್ಮಿತಾ ಅಂತೆ, ಅವರ ಭಾಷಣ ಕೇಳ್ತಾ ಕಾಲ ತಳ್ತೀಯ. ಸಾಂಗ್ ಕೇಳೋಕೆ ಬಿಡಲ್ಲ ನೀನು" ಅಂತ ಅವನ ಜಗಳ. "ಅಡ್ವರ್ಟೈಸ್ ಮೆಂಟ್ ನೂ ಭಕ್ತಿಂದ ಕೇಳೋ ಮೆಂಟಲ್ ಗಳಿರ್ತಾರೆ ಅಂತ ನಿನ್ನ ನೋಡೇ ಗೊತ್ತಾಗಿದ್ದು" ಅಂತ ನಾನು ಕಾಲೆಳದರೆ " ನಿನಗೇನ್ ಗೊತ್ತು ವೀಕ್ ಎಂಡ್ ಪ್ಲಾನ್ ಮಾಡಬಹುದು ಗೊತ್ತಾ ? ರಿಲಾಯನ್ಸ್ ಲಿ, ವುಡ್ ಲ್ಯಾಂಡ್ ಲಿ ಆಫರ್ ಇದೆ ಅಂತಾ, ಪ್ಯಾಲೇಸ್ ಗ್ರೌಂಡ್ ಎಕ್ಸಿಬಿಷನ್ ಬಗ್ಗೆ ನಿಂಗೆ ಹೇಳಿದ್ದು ನಾವೇ ಮ್ಯಾಡಂ ಅದೂ ಈ ಎಫ್ ಎಮ್ ಅಡ್ವರ್ಟೈಸ್ ಮೆಂಟೇಮಾ " ಅಂತ ಹುಬ್ಬು ಹಾರಿಸೋದು ಅವನು. ಇಷ್ಟೆಲ್ಲಾ ಆಗೋ ಹೊತ್ತಿಗೆ ಇಬ್ಬರ ಕಿವಿಯಿಂದಲೂ ಸ್ಪೀಕರ್ ಗಳು ಕೆಳಗೆ ಬಿದ್ದು ಎಫ್ ಎಮ್ ಅನಾಥವಾಗಿ ಕೂಗುತ್ತಿರುತ್ತದೆ. ಅಯ್ಯೋ ಪಾಪಿ ಆಗಲೇ ಟೈಮ್ ಆಯ್ತು ಅಂತ ನಾನು ಹೊರಟಾಗಿರುತ್ತದೆ.
ಇಷ್ಟು ಮಾತ್ರದ ದೂರವನ್ನು ಅಷ್ಟೆನಿಸುವಂತೆ ನಿಧಾನಕ್ಕೆ ಹೆಜ್ಜೆ ಹಾಕಿ ನಡೆಯಲು ನಮ್ಮಿಬ್ಬರಿಗೂ ಇಷ್ಟ. ಒಂದೊಂದು ದಿನ ಎಲ್ಲ ತಮಾಷೆಯಂತೆ ತೋರುತ್ತಾ ಮಾತನಾಡುವ ನಾವು ಕೆಲವೊಮ್ಮೆ ಸಿಕ್ಕಾಪಟೆ ಸಿರಿಯಸ್ ಆಗಿ ಬಿಡ್ತೀವಿ. ಅವತ್ತು ಹಾಗೆಯೇ ಅವನೇ ಕೇಳಿದ್ದ " ಅಲ್ಲ ಕಣೆ ಇಲ್ಲಿ ಇಷ್ಟೊಂದು ಬಸ್ ಓಡಾಡುತ್ತವೆ. ಎಲ್ಲಾ ಬಸ್ ಗಳೂ ಒಂದೇ ಬಣ್ಣ. ಆದ್ರೆ ನಾವು ಬರೋ ಬಸ್ ನೋಡು ಎಷ್ಟೊಂದು ಬಣ್ಣಗಳಿವೆ " " ಹೌದು ಕಣೋ ಬದುಕಿಗೇ ಸಾವಿರ ಬಣ್ಣವಂತೆ, ಇನ್ನು ನಾವ್ ಬರೋ ಬಸ್ಸಿಗೆ ಅಷ್ಟು ಬಣ್ಣಗಳಿರೋದು ಆಶ್ಚರ್ಯನಾ ? " ಅಂದೆ. "ಬದುಕು ಅನ್ನೋದನ್ನ ಅಷ್ಟು ಪ್ರೀತಿಸ್ತೀಯಲ್ಲ ನೀನು . ಬದುಕು ನಿನಗೆ ಬೇಕಾಗಿದ್ದೆಲ್ಲವನ್ನೂ ಕೊಟ್ಟಿದೆಯಾ ?" "ಬದುಕು ಸಾಕಷ್ಟು ಕೊಟ್ಟಿದೆ, ನನಗೆ ಬೇಕಾದ್ದನ್ನು ನಾನಾರಿಸಿಕೊಂಡಿದ್ದೇನೆ" ಅಂದೆ ನಗುತ್ತಾ. " ಬೇಕಾದವರನ್ನೂ ?" ಅಂತ ಬಂದ ಪ್ರಶ್ನೆಗೆ ಏನು ಹೇಳಬೇಕೋ ಅರ್ಥವಾಗದೆ " ಅದು ಕೊಟ್ಟಿಲ್ಲ, ನಾನೂ ಕೇಳಿಲ್ಲ " ಅಂದುಬಿಟ್ಟೆ. ಅಲ್ಲಿಗೆ ದಾರಿ ಕವಲಾಗಿತ್ತು. ಬೈ ಎನ್ನುತ್ತಾ ಕೈ ಬೀಸಿ ಹೋದವನನ್ನು ನೋಡುತ್ತಿದ್ದವಳು ಮನಸ್ಸನ್ನೋದುವ ಶಕ್ತಿಯೇನಾದರೂ ಇದೆಯಾ ಈ ಹುಡುಗನಿಗೆ ಎಂದು ವಿಸ್ಮಿತಳಾಗಿದ್ದೆ.
ಹೀಗೆ ಗಲಾಟೆ, ಸೀರಿಯಸ್ ಗಳ ನಡುವೆ ದಿನ ಕಳೆಯುತ್ತಿದೆ. ನಾವು ಹೋಗುವ ದಾರಿಯಲ್ಲಿ ಯಾವಾಗಲೂ ಕಪ್ಪು ಕಾರೊಂದು ನಿಂತಿರುತ್ತದೆ. ಇಷ್ಟು ದಿನ ಅದರ ಬಗ್ಗೆ ಗಮನವಿರದಿದ್ದರೂ ಸುಮಾರು ತಿಂಗಳ ಹಿಂದೆ ಕಪ್ಪು ಕಾರಿನ ಹತ್ತಿರ ಬಂದರೆ ಹುಡುಗ ನಿಧಾನ ಬರ್ತೀನಿ ನೀ ಮುಂದೆ ಹೋಗು ಎನ್ನುತ್ತಾನೆ. ನಾನೂ ಯಾವತ್ತು ಹಿಂದೆ ತಿರುಗಿ ನೋಡಿಲ್ಲ. ಹಾಗೆ ನೋಡಿದರೆ ಅವನ ಮೇಲಿನ ನಂಬಿಕೆಗೆ ದ್ರೋಹ ಬಗೆದಂತೆ ಅನಿಸುತ್ತೆ ನಂಗೆ. ಆದರೆ ದಾರಿಯುದ್ದಕ್ಕೂ ಅವನನ್ನು ಮಿಸ್ ಮಾಡಿಕೊಳ್ಳುತ್ತೇನೆ, ಅವನ ಕಾಲೇಜ್ ಇರದಿದ್ದಾಗ ಅವನನ್ನು ಮಿಸ್ ಮಾಡಿಕೊಂಡಂತೆ. ಕಾಲೇಜ್ ಇಲ್ಲದಿದ್ದರೂ ಅವತ್ತು ಅವನ ಬಸ್ಸಲ್ಲಿ ಕಂಡಾಗ ಆಶ್ಚರ್ಯವಾಯ್ತು. ಇಳಿದು ಒಟ್ಟಿಗೆ ಹೋಗುವಾಗ ಕಪ್ಪು ಕಾರಿಗಿಂತಲೂ ಮೊದಲೇ ನನ್ನ ನಿಲ್ಲಿಸಿ ಇಲ್ಲೇ ಕುಳಿತುಕೊಳ್ಳೋಣ ಎಂದವನು ನನ್ನ ಕೈ ಹಿಡಿದುಕೊಂಡು " ಜೀವನದಲ್ಲಿ ಕೆಲವೊಮ್ಮೆ ಏನೂ ಅಲ್ಲದವರು ಇಷ್ಟು ಹತ್ತಿರವಾಗುತ್ತಾರೆ ಅಂತ ಗೊತ್ತಾಗೊಲ್ಲ. ನಿನ್ನ ಕಂಡರೆ ಇಷ್ಟ ನಂಗೆ. ನಿನ್ನನ್ನಲ್ಲದೇ ಇನ್ಯಾರನ್ನೂ ನಂಬೋದು ಕಷ್ಟ ನಂಗೆ. ಅದಕ್ಕೆ ನಿನಗೆ ಹೇಳ್ತಿದೀನಿ. ಅವಳು ನನ್ನ ಗೆಳತಿ. ಇತ್ತೀಚಿಗೆ ತುಂಬಾ ಹಚ್ಚಿಕೊಂಡು ಬಿಟ್ಟೆ ಅವಳನ್ನ. ಪ್ರೀತಿಯಲ್ಲಿದೀನಿ ಕಣೆ ನಾನು. ಅವಳನ್ನು ತುಂಬಾ ಪ್ರೀತಿಸ್ತೀನಿ. ಎಲ್ಲವನ್ನೂ ಹೇಳಿಬಿಟ್ಟೆ ನಿನ್ನೆ ಅವಳಿಗೆ..!! ಈಗ ಭಯವಾಗುತ್ತಿದೆ. ಕಪ್ಪು ಕಾರಿನ ಪಕ್ಕ ಯಾವತ್ತೂ ಅವಳು ನನಗಾಗಿ ಕಾಯುತ್ತಾಳೆ. ಅದಕ್ಕಾಗಿಯೆ ಅಲ್ಲಿಂದ ನಾನು ನಿಧಾನವಾಗಿ ಬರ್ತೀನಿ." ಅಂತ. ಅವಳೊಂದಿಗಿನ ಮುಂದಿನ ಬದುಕಿನ ಕನಸನ್ನೆಲ್ಲ ಬಿಚ್ಚಿಟ್ಟರೆ ಅವನ ಕಣ್ಣ ಹೊಳಪಿಗೆ ಮರುಳಾಗಿ ಬಿಟ್ಟಿದ್ದೆ. ಖುಷಿಯನ್ನೆಲ್ಲ ತಂದು ಮಡಿಲೊಳಗೆ ಸುರಿದಂತಾಗಿತ್ತು. ಯಾಕೋ ಕಾಲೇಜ್ ಮುಗಿಸಿ ಸೆಟ್ಲ್ ಆಗು ಆಮೇಲೆ ಈ ಪ್ರೀತಿ ಪ್ರೇಮ ಎಲ್ಲ ಅಂತಾ ಲೆಕ್ಚರ್ ಕೊಡೊ ಮನಸ್ಸು ಬರಲೇ ಇಲ್ಲ. "ಆಲ್ ದಿ ಬೆಸ್ಟ್, ಎಲ್ಲ ಒಳ್ಳೆದಾಗುತ್ತೆ" ಅಂತ ಹೇಳಿ ಬಂದುಬಿಟ್ಟಿದ್ದೆ. 


ಫೋಟೋ: ರಂಜಿತಾ ಹೆಗಡೆ. 

ಈಗ ಆ ಹುಡುಗನಿಗೆ ಕಪ್ಪು ಕಾರಿನ ಪಕ್ಕದ ಬೆಳ್ಳಿ ತಾರೆಯೊಬ್ಬಳು ಸಿಕ್ಕಿದ್ದಾಳೆ. ಆಕೆಯದೊಂದು ಮಲ್ಲಿಗೆಯಂಥ ಮುಗುಳ್ನಗೆ ಕಾಯುತ್ತಿರುತ್ತದೆ. ನೀ ಮುಂದೆ ಹೋಗು ಎಂದು ಗೋಗರೆದರೂ ಕೇಳದೆ ಅವರ ಹಿಂದೆ ಅವರಿಗಿಂತ ನಿಧಾನ ಹೆಜ್ಜೆ ಹಾಕುತ್ತಾ ಅವರನ್ನು ನೋಡುತ್ತಾ ಹೋಗುವಲ್ಲಿ ಖುಷಿಯಿದೆ. ಜಗಳ ಕಾಯುತ್ತ ಕೈ ಕೈ ಹಿಡಿದು ಹೋಗುವ ಅವರನ್ನು ನೋಡಿದರೆ ಅಕಸ್ಮಾತ್ ಆಗಿ ನಿನ್ನ ಕೈ ಬೆರಳುಗಳ ನಡುವೆ ಸಿಕ್ಕಿಕೊಂಡ ನನ್ನ ಕಿರುಬೆರಳನ್ನು ಬಿಡಿಸಿಕೊಳ್ಳುವ ಸಣ್ಣ ಪ್ರಯತ್ನವನ್ನೂ ಮಾಡದೆ ನಿನ್ನೊಂದಿಗೆ ಅಷ್ಟು ದೂರ ಹೆಜ್ಜೆ ಹಾಕಿದ ನೆನಪಾಗುತ್ತದೆ.


ಕಣ್ಣೊಳಗೊಂದು ದೀಪದ ಮಿನುಗು, ತುಟಿಯಂಚಲ್ಲೊಂದು ಸಣ್ಣ ಕಿರುನಗೆ..