Thursday 28 June 2012







ಸರಸ್ವತಿಯ ಆಸ್ಥಾನದಲ್ಲಿ ಮರೆಯಲಾರದ ಒಂದು ದಿನ ....


ಪ್ರವಾಸ ಎಂದರೆ ಖುಷಿಯೇ.. ನಗು, ಗಲಾಟೆ ಎಲ್ಲವು ಅದರ ಭಾಗಗಳೇ.. ಆದರೆ ಪ್ರವಾಸಕ್ಕೆ ಹೋದ ಸ್ಥಳವೊಂದು ಮಾತು ಮನಸ್ಸು ಎರಡನ್ನೂ ಮೂಕವಾಗಿಸಿತ್ತು ಅಂದರೆ ನಂಬಲು ಸಾಧ್ಯಾನಾ ?? ಮೊನ್ನೆ ಜೂನ್ ೨೩ ಕ್ಕೆ ಅದು ಸಾಧ್ಯವಾಗಿತ್ತು. ಹರಳಳ್ಳಿಯ ಅಂಕೆ ಗೌಡರ ಪುಸ್ತಕದ ಮನೆ ನೋಡಿದಾಗ ಮಾತು.. ಮನಸು ಎರಡೂ ಮೂಕವಾಗಿತ್ತು... ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎನ್ನುವ ವಾಕ್ಯ ಕಣ್ಣಿಗೆ ಕಂಡಿತ್ತು.ಎಲ್ಲ ಕಾಲೇಜ್ಗಳಲ್ಲಿ , ಲೈಬ್ರೆರಿಗಳಲ್ಲಿ ಇದೇ ಇರತ್ತೆ ಅಂದುಕೊಂಡೇ ಒಳಗೆ ಹೆಜ್ಜೆ ಇಟ್ಟವಳಿಗೆ ಅನಿಸಿದ್ದು ಕೈ ಮುಗಿದು ಮಾತ್ರವಲ್ಲ ಸಾಷ್ಟಾಂಗ ನಮಸ್ಕಾರ ಮಾಡಿಯೇ ಒಳಗೆ ಅಡಿ ಇಡಬೇಕಿತ್ತು ಎಂದು. ನಾನು ಕುಬೇರನ ಆಸ್ಥಾನ ನೋಡಿಲ್ಲ ಅಲ್ಲಿ ಲಕ್ಷ್ಮಿ ಕಾಲು ಮುರಿದುಕೊಂಡು ಬಿದ್ದಿದ್ದಳಂತೆ.. ಕೈಲಾಸ, ವೈಕುಂಠ , ಇಂದ್ರನ ಐಭೋಗ.. ಉಹೂ೦.. ..ಅದೆಲ್ಲ ಹೋಗಲಿ ರಾಜಮಹಾರಾಜರ ಯಾವ ವೈಭವದ ಆಸ್ಥಾನವನ್ನೂ ನೋಡಿಲ್ಲ. ಆದರೆ ನಾನು ಸರಸ್ವತಿಯ ಅಸ್ಥಾನವನ್ನು ನೋಡಿದ್ದೇನೆ. ಹೌದು ಅಂಕೆ ಗೌಡರ ಪುಸ್ತಕದ ಮನೆ ಸರಸ್ವತಿಯ ಆಸ್ಥಾನವೇ. ನಾನು ಸ್ವಲ್ಪ ಸೊಕ್ಕಿನಿಂದ ಮತ್ತು ಹೆಮ್ಮೆಯಿಂದ ಹೇಳಬಲ್ಲೆ ನಾನು ಸರಸ್ವತಿಯ ಅಸ್ಥಾನವನ್ನು ಕಣ್ಣಾರೆ ನೋಡಿದ್ದೇನೆ ಮತ್ತು ಅಲ್ಲಿ ಕೆಲ ಹೊತ್ತು ಕಳೆದಿದ್ದೇನೆ ಎಂದು.



ಸರಸ್ವತಿಯ ಆಸ್ಥಾನದ ಮುಂಭಾಗ 





ಪ್ರಕಾಶಣ್ಣ ಪ್ರವಾಸದಲ್ಲಿ ನಾವೊಂದು ಲೈಬ್ರೆರಿಗೆ ಭೇಟಿ ಕೊಡುತ್ತಿದ್ದೇವೆ ಎಂದಾಗ, ಎಲ್ಲ ಕಡೆ ನೋಡಿರ್ತೆವಲ್ಲ ಇದೇನು ಹೊಸದು ? ಎಂದುಕೊಂಡಿದ್ದೆ. ಆದರೆ ಪ್ರವಾಸಕ್ಕೆ ೨ ದಿನ ಮುಂಚೆ ಪ್ರಕಾಶಣ್ಣ ಈ ಲೈಬ್ರೆರಿ ಯ ಬಗ್ಗೆ ಬಾಲು ಸರ್ ಬರೆದ ಲೇಖನದ ಲಿಂಕ್ ಕಳಿಸಿದಾಗ(http://nimmolagobba.blogspot.com/2010/08/blog-post_16.html ) ಓದಿ ಆಶ್ಚರ್ಯಗೊಂಡಿದ್ದೆ. ಆದರೆ ಅಲ್ಲಿ ಹೋದಾಗ ಮಾತ್ರ ಕಣ್ಣೆದುರು ತೆರೆದು ಕೊಂಡಿದ್ದು ಬೇರೆಯದೇ ಲೋಕ. ಅದು ಪುಸ್ತಕಗಳ ಲೋಕ. ನೋಡಿದಷ್ಟೂ ಕಂಡಿದ್ದು ಪುಸ್ತಕಗಳೇ. ಯಾವುದನ್ನ ನೋಡಲೋ..ಅಥವಾ ತೆಗೆದು ಓದಲೋ ಎನ್ನುವ ಗೊಂದಲದಲ್ಲೇ ಸ್ವಲ್ಪ ಹೊತ್ತು ಕಳೆದೇ ಹೋಯಿತು ಅನ್ನಿಸುತ್ತಿದೆ ಈಗ.. ಅಷ್ಟೊಂದು ಪುಸ್ತಕಗಳು. ಅಪರೂಪದ ಪುಸ್ತಕಗಳು.. ಹೆಸರೇ ಕೇಳದ ಪುಸ್ತಕಗಳು.. ಕಣ್ಣಿನಿಂದ ನೋಡುತ್ತೇನೆ ಅಂದುಕೊಂಡಿರದಿದ್ದ ಪುಸ್ತಕಗಳು..ಈ ಎಲ್ಲವೂ ಸಾಧ್ಯವಾದದ್ದಕ್ಕೆ ಕೋಟಿ ನಮನಗಳು ಸಲ್ಲಬೇಕು ಆ ಮಹಾನುಭಾವ ಅಂಕೆ ಗೌಡರಿಗೆ.. ಒಂದು ಸಕ್ಕರೆ ಕಾರ್ಖಾನೆಯ ಟೈಮ್ ಕೀಪೆರ್ ಆಗಿದ್ದುಕೊಂಡು ತಮ್ಮ ಜೀವನದ ಬಹು ಪಾಲು ಆಯುಷ್ಯ ಮತ್ತು ಗಳಿಕೆಯ ಹಣವನ್ನು ಪುಸ್ತಕಗಳಿಗಾಗಿಯೇ ವ್ಯಯಿಸಿ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ, ಮುಂದಿನ ಪೀಳಿಗೆಗೆ ನೀಡಬೇಕೆಂದಿರುವ ಆ ಜೀವಕ್ಕೆ ಶಿರ ಸಾಷ್ಟಾಂಗ ನಮಸ್ಕಾರ. ಅಂಕೆ ಗೌಡರ ಅಸೆಗೆ ಆಸರೆಯಾಗಿ ನಿಂತ ಅವರ ಪತ್ನಿಯವರಿಗೂ ಕೂಡ ನಮನಗಳು ಸಲ್ಲಲೇ ಬೇಕು..


ಪುಸ್ತಕ ಲೋಕದಲ್ಲಿ ಅಂಕೆ ಗೌಡರಂತಹ ಮಹಾನ್ ಸಾಧಕರೊಡನೆ ಸಂತೋಷ ಹಂಚಿಕೊಂಡ ಒಂದೆರಡು ಕ್ಷಣ ..


ಅಲ್ಲಿ ಏನು ನೋಡಿದೆ ಎಂದರೆ ಎಲ್ಲವನ್ನೂ ಹೇಳಲಾರೆ. ನೋಡಿದ್ದೆಲ್ಲವು ಹೊಸದೇ.. ಅಪರೂಪದ್ದೇ.. ಹೇಳಲು , ವರ್ಣಿಸಲು ಸಾಧ್ಯವಿಲ್ಲ ಅವುಗಳನ್ನ. ಕಿಟ್ಟೆಲ್ ಡಿಕ್ಷನರಿಗಿಂತಲೂ ಹಳೆಯ ಡಿಕ್ಷನರಿ ನೋಡಿದ್ದು. ೧೮೦೦ ರಲ್ಲಿ ಪ್ರಕಟಣೆಯಾದ ಪುಸ್ತಕ ನೋಡಿದ್ದು, ರಾಜಾ ರವಿವರ್ಮರ ಎಲ್ಲಾ ಚಿತ್ರಗಳಿರುವ ಪುಸ್ತಕ ನೋಡಿದ್ದು. ಮಾನವ ದೇಹ ರಚನೆಯ ಬಗೆಗೆ ಇದ್ದ ಹೊರಲಾರದ ಪುಸ್ತಕವನ್ನು ಅದು ಇದ್ದಲ್ಲಿಯೇ ತಿರುವಿ ಹಾಕಿದ್ದು. ೧೯೬೬ ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕ, ಸುಧಾ ವಾರಪತ್ರಿಕೆಯ ಮೊದಲಸಂಚಿಕೆ ನೋಡಿದ್ದು.. ಅಬ್ಬಾ..!! ಹೇಳುತ್ತಾ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಾ ಹೋಗುವುದು. ನಾನು ಯಾವುದೋ ಸಮಿತಿಯ ಕಾಲೇಜಿನ, ಸರ್ಕಾರದ ಲೈಬ್ರೆರಿಗಳನ್ನ ನೋಡಿದ್ದೆ. ಆದರೆ ಒಬ್ಬ ವ್ಯಕ್ತಿ ಜೀವನದಲ್ಲಿ ಒಂದು ಅಪರೂಪದ ಲೈಬ್ರೆರಿ ಮಾಡುವಷ್ಟು ಪುಸ್ತಕಗಳನ್ನು ಸಂಪಾದಿಸುತ್ತಾನೆ ಅಂತ ಅಗಲೀ , ಅದನ್ನ ನನ್ನ ಆಯುಷ್ಯದಲ್ಲಿ ನಾನು ನೋಡುತ್ತೇನೆ ಎಂದಾಗಲೀ ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಅಲ್ಲಿ ಹೋದ ತಕ್ಷಣ ನಮಗೆ ಅಂಕೆ ಗೌಡರು ನೀಡಿದ್ದು " 50 wonders of the world" ಎನ್ನುವ ಪುಸ್ತಕವನ್ನು. ಆ ಲೈಬ್ರೆರಿಯಲ್ಲಿ ಅಷ್ಟು ಹೊತ್ತು ಕಳೆದ ಮೇಲೆ ನನಗನ್ನಿಸಿದ್ದು "ಐತ್ತೊಂದನೆ ಅಧ್ಬುತದಲ್ಲಿ " ನಿಂತು " 50 Wonders of the World" ಎನ್ನುವ ಪುಸ್ತಕ ನೋಡಿದೆ ಎಂದು.

ಬಾಲು ಸರ್ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದು ..





ಅಂಕೆ ಗೌಡರನ್ನು ಆಜಾದ್ ಸರ್ ಸನ್ಮಾನಿಸಿದ ಕ್ಷಣ ..


ರೂಪಾ ಸತೀಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಾಗ ..


ಬರಿಯ ಕೆಲಸ ಕಾರ್ಯಗಳು, ಅಥವಾ ಊರು ಬೇಸರವಾದವರು ಮಾತ್ರವಲ್ಲ , ಜೀವನವೇ ಬೇಸರವಾದ ಒಬ್ಬ ವ್ಯಕ್ತಿ ಒಮ್ಮೆ ಹರಳಳ್ಳಿಯ ಪುಸ್ತಕದ ಮನೆಗೆ ಭೇಟಿ ನೀಡಿ ಕೆಲ ಹೊತ್ತು ಕಳೆದರೆ ಮತ್ತೆ ಜೀವನೋತ್ಸಾಹ ತುಂಬಿಕೊಂಡು ಬರುತ್ತಾನೆ ಎನ್ನುವದರಲ್ಲಿ ಸಂಶಯವೇ ಇಲ್ಲ. ಬೆಳಿಗ್ಗೆ ೧೦.೩೦ ರ ಸುಮಾರಿಗೆ ಅಲ್ಲಿ ಹೋಗಿ ೨ ಗಂಟೆಯ ಸುಮಾರಿಗೆ ಹೊರ ಅಡಿ ಇಟ್ಟಾಗಲೇ ಗೊತ್ತಾಗಿದ್ದು ನಾವು ಭೂಲೋಕದಲ್ಲೇ ಇದ್ದೇವೆ ಎಂದು. ತಲೆಗೆ ಸೂರ್ಯ ಶಾಖ ತಾಗಿದಾಗಲೇ ಗೊತ್ತಾಗಿದ್ದು ಅದು ಮದ್ಯಾನ್ಹದ ಸಮಯವೆಂದು.

ನಮ್ಮ ಪ್ರೀತಿಯ ಬಳಗ 

ಇಂತಹದ್ದೊಂದು ಅಧ್ಬುತವನ್ನು ತೋರಿಸಿದ ಬಾಲು ಸರ್ ಮತ್ತು ಪ್ರಕಾಶಣ್ಣನಿಗೆ ಧನ್ಯವಾದಗಳು . ಮತ್ತು ಈ ಪ್ರವಾಸದಲ್ಲಿ ನನ್ನೊಡನೆ ಸೇರಿ. ಸುಂದರ ನೆನಪುಗಳನ್ನು ಕಟ್ಟಿಕೊಟ್ಟ ಎಲ್ಲ ಬ್ಲಾಗ್ ಮಿತ್ರರಿಗೆ ಈ ಪುಟಾಣಿಯ ನಮನಗಳು..

ಚಿತ್ರ ಕ್ರಪೆ - ಪ್ರಕಾಶ್  ಹೆಗ್ಡೆ 

Tuesday 12 June 2012


ಅಂಥಹದ್ದೊಂದು ಸುಂದರ ಕಿರುನಗೆಯೊಂದನ್ನು ನಮಗಾಗಿ ನಾವೇ ಸೃಷ್ಟಿ ಮಾಡಿಕೊಳ್ಳಲು ನಮಗೆ ಸಮಯವಿಲ್ಲ..... 



ಎರಡು ಮೊಬೈಲ್ ಫೋನ್ ಗಳಲ್ಲಿ ಒಂದನ್ನು ಊರಲ್ಲಿ ಬಿಟ್ಟು ಬಂದವಳಿಗೆ ಮೊನ್ನೆಈ ಮೊಬೈಲ್ ಲ್ಲಿ ಎಲ್ಲರ ನಂಬರ್ ಗಳು ಇದೆಯಾ ಇಲ್ಲವಾ ಎನ್ನುವ ಅನುಮಾನ ಕಾಡಲು ಶುರು ಆಯ್ತು . ಸರಿ ಅನುಮಾನಕ್ಕೊಂದು ಪರಿಹಾರ ಬೇಕೇ ಬೇಕು ಎನ್ನುತ್ತಾ contact list ನಲ್ಲಿ ಹುಡುಕುತ್ತ ಕುಳಿತೆ. ಎಲ್ಲರ ನಂಬರ್ ಗಳಿವೆ ಎಂದೂ confirm ಆದ ನಂತರ ಪಿ ಯು ಸಿ ಯ ಗೆಳತಿಯೊಬ್ಬಳ ನಂಬರ್ ನೋಡಿ ತುಂಬಾ ದಿನ ಆಯ್ತಲ್ಲ ಕಾಲ್ ಮಾಡಿ. ಮೆಸೇಜ್ ಮಾಡೋದಂತೂ ನಿಂತೇ ಹೋಗಿದೆ. ಚಾಟಿಂಗ್ ಹೋಗಲಿ ಫಾರ್ವರ್ಡ್ ಮೆಸೇಜ್ ಕೂಡ ಇಲ್ಲ. ನಂಬರ್ ಚೇಂಜ್ ಮಾಡಿದ್ದಾಳೋ ಏನೋ ಎನ್ನುವಂತಹ ನೂರಾರು ಯೋಚನೆಗಳನ್ನ ತುಂಬಿಕೊಂಡೆ ಡಯಲ್ ಬಟ್ಟನ್ ಒತ್ತಿದೆ. ರಿಂಗ್ ಆಗಿ ರಿಸೀವ್ ಮಾಡಿದವಳು ಯಾರು ? ಎಂದಳು. ನಾನು ನನ್ನ details ಎಲ್ಲ ಹೇಳಿದ ನಂತರ ,ನಿನ್ನ ನಂಬರ್ ಚೇಂಜ್ ಆಗಿದೆ ಅಂದ್ಕೊಂಡೆ ಅದಕ್ಕೆ ಮೆಸೇಜ್ ಅಥವಾ ಕಾಲ್ ಮಾಡಿಲ್ಲ ಎಂದಳು ಅವಳು. ನಾನು ಹಾಗೆ ಅಂದುಕೊಂಡಿದ್ದೆ ಎಂದೇ ನಾನು. ನಮ್ಮ ಮಾತುಗಳಲ್ಲಿ ಮೊದಲರ್ಧ ಏನು ಮಾಡ್ತಿದಿಯಾ? ಎಲ್ಲಿ ವರ್ಕ್ ? ಯಾವ ಏರಿಯ ? ಇದೆ ಆದರೆ ಅಮೆಲಿನದು ಮತ್ತೆ..??? ಅಂದರೆ ಏನಿಲ್ಲ.. ಎಂತಾ ಸುದ್ದಿ ಅಂದರೆ ಎಂತು ಇಲ್ಯೇ .. ಇಷ್ಟರಲ್ಲೇ ಮುಗಿದಿತ್ತು . ಈ ಮತ್ತೆ... ಏನಿಲ್ಲ... ಎಂಬ ರಾಗದ ನಾಟಕ ಸಾಕಾಗಿ ಸರಿ ಮತ್ತೆ ಮಾತನಾಡೋಣ ಎನ್ನುತ್ತಾ ಫೋನ್ ಕಟ್ ಮಾಡಿದೆ.


"Relations are not fade, but we just reduce the communications" ಎಂಬ ಫಾರ್ವರ್ಡ್ ಮೆಸೇಜ್ ಬೇಡವೆಂದರೂ ನೆನಪಾಯಿತು.ಹೊಸ ಹೊಸ ಸಂಪರ್ಕ ತಂತ್ರಜ್ಞಾನಗಳು ಮನುಷ್ಯನನ್ನು ಬೆಸೆಯಲು ಅವಿಷ್ಕಾರವಾಗುತ್ತಿದ್ದರೂ ಯಾಕೋ ಸಂಬಂಧಗಳ ನೆಲೆಗಟ್ಟು ಗಳು ಸಡಿಲಗೊಳ್ಳುತ್ತಿದೆ ಎನ್ನಿಸುತ್ತಿದೆ.ಹೊಸ ಸಂಬಂಧಗಳಿಗೆ ಮನಸ್ಸು ತೆರೆದುಕೊಂಡಾಗ ಪ್ರತಿ ಸಂಬಂಧಗಳು ಆಕರ್ಷಣೀಯವಾಗಿರುತ್ತವೆ. ಆ ಸಂಬಂಧಗಳು ಗಟ್ಟಿಯಾಗಬೇಕಾಗಿರುತ್ತವೆ. ಅವಾಗ ಕುಂತಿದ್ದು, ನಿಂತಿದ್ದು, ಅತ್ತಿದ್ದು , ನಕ್ಕಿದ್ದು. ಮಾರ್ನಿಂಗ್, ಇವಿನಿಂಗ್ ಎಲ್ಲವೂ ಮೆಸೇಜ್ ಅಥವಾ ಕಾಲ್ ಗಳಲ್ಲಿ ಹರಿದಾಡುತ್ತಿರುತ್ತವೆ. ಪ್ರತಿ ಭೇಟಿಗಾಗಿಯು ಮನಸು ಕಾಯುತ್ತದೆ. ಪ್ರತಿ ಭೇಟಿಗಳು ಸ್ಮರಣೀಯವಾಗಿರುತ್ತವೆ. ಯಾವಾಗ ಸಂಬಂಧಗಳು ಗಟ್ಟಿಯಾಗಿವೆ ಎಂಬ ಒಂದು ಹುಂಬ confidence ಬೆಳೆದುಬಿಡುತ್ತದೋ ಆಗ ಇವನು /ಇವಳು ನನ್ನ ಗೆಳೆಯ /ಗೆಳತಿಯಲ್ಲವಾ.. ನನ್ನ ಬಿಟ್ಟು ಎಲ್ಲಿ ಹೋಗುತ್ತಾರೆ ಎಂಬ ಧೈರ್ಯವಿರುತ್ತದೆ. ಇವತ್ತು ಮೆಸೇಜ್ ಅಥವಾ ಕಾಲ್ ಮಾಡಲಾಗಲಿಲ್ಲವಾ ನಾಳೆ ಮಾಡಿದರಾಯಿತು ನನ್ನ ಫ್ರೆಂಡ್ ತಾನೇ ಎಂದುಕೊಳ್ಳುತ್ತೇವೆ.ಈ ವಾರ ಸಿಗಲು ಅಗಲಿಲ್ಲವಾ ಮುಂದಿನವಾರ ನೋಡಿಕೊಳ್ಳೋಣ ಎಂದುಕೊಳ್ಳುತ್ತೇವೆ. ಆದರೆ ಈ ನಾಳೆಗಳ, ವಾರಗಳ ಸಂಖ್ಯೆ ಜಾಸ್ತಿ ಆದಂತೆಲ್ಲ ಸಂಬಂಧಗಳ ನಡುವಿನ ಅಂತರ ಜಾಸ್ತಿಯಾಗುತ್ತ ಹೋಗುತ್ತದೆ. ಕಾಲೇಜ್ , ಆಫೀಸ್ , ಸೋಸಿಯಲ್ ನೆಟ್ವರ್ಕ್ ಗಳಲ್ಲಿ ದಿನ ನಿತ್ಯ ನಾವು ಎಷ್ಟೋ ಹೊಸ ಸಂಬಂಧಗಳಿಗೆ ತೆರೆದು ಕೊಳ್ಳುತ್ತೇವೆ. ಅವುಗಳನ್ನೆಲ್ಲ ಉಳಿಸಿಕೊಳ್ಳುವ ಭರದಲ್ಲಿ ಜೊತೆಯಲ್ಲಿದ್ದ, ಹೆಗಲು ನೀಡಿದ, ಬೆನ್ನುತಟ್ಟಿದ ಎಷ್ಟೋ ಸಂಬಂಧಗಳಿಗೆ ಸಮಯ ಹಾಗೂ ಬೆಲೆ ಕೊಡುವುದನ್ನು ಮರೆತು ಹೋಗಿರುತ್ತೇವೆ. ಯಾವುದೇ ಮನುಷ್ಯ ಹೊಸ ಸಂಬಂಧಗಳಿಗೆ ತೆರೆದು ಕೊಂಡಾಗ ಶುರುವಿನಲ್ಲಿ ಆಕರ್ಷಕವಾಗಿ ಕಾಣುವ ಸಂಬಂಧಗಳು ಕ್ರಮೇಣ ಏಕೆ ಆಕರ್ಷಣೆ ಕಳೆದುಕೊಳ್ಳುತ್ತವೆ?? ಸಂಬಂಧಗಳನ್ನು ಗಟ್ಟಿಯಾಗಿಸುವಲ್ಲಿನ ಉತ್ಸಾಹ, ಆತುರತೆ , ಶ್ರದ್ಧೆ, ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಏಕೆ ಕಡಿಮೆಯಾಗುತ್ತಿದೆ??


ಗೆಳತಿಯೊಬ್ಬಳು ಹುಬ್ಬಳ್ಳಿಯಲ್ಲಿ ಓದುತ್ತಿದ್ದಾಗ ನಾನು ಅವಳು ವಾರಕ್ಕೊಂದು ಕಾಗದ ಬರೆದುಕೊಳ್ಳುತ್ತಿದ್ದೆವು. ಅಂಚೆ ಇಲಾಖೆ ಜೀವಂತವಾಗಿರುವುದಕ್ಕೆ ನಾವೇ ಕಾರಣವೇನೋ ಎನ್ನುವಂತೆ..!! ಮೊಬೈಲ್ ಇರಲಿಲ್ಲ ಆಗ. ಅವಳು ಈ ಹಬ್ಬಕ್ಕೆ ಮನೆಗೆ ಬಂದಿರಬಹುದೆಂಬ ಊಹೆಯ ಮೇರೆಗೆ ಲ್ಯಾಂಡ್ ಲೈನ್ ಗೆ ಕಾಲ್ ಮಾಡಿಕೊಳ್ಳುತ್ತಿದ್ದೆವು. ಬಸ್ , ಕ್ಲಾಸಿನ ಗಡಿಬಿಡಿಯಲ್ಲೂ ಹತ್ತು ನಿಮಿಷಗಳ ಮಾತಿಗಾದರೂ ಒಬ್ಬರಿಗೊಬ್ಬರು ಸಿಗುತ್ತಿದ್ದೆವು. ಆದರೆ ಈಗ ಇಬ್ಬರ ಬಳಿಯಲ್ಲೂ ಮೊಬೈಲ್ ಇದೆ. ಕಾಲ್ ಗಳು ಕಡಿಮೆ ಆಗಿವೆ. ಅರ್ಧಗಂಟೆಯ ದಾರಿಯಲ್ಲಿ ಇಬ್ಬರ ಮನೆಗಳಿವೆ. ಆದರೂ ವಾರಕ್ಕೊಮ್ಮೆ ಕೂಡಾ ಸಿಗುವುದಿಲ್ಲ ನಾವು. ಇಂದು advanced ಎನ್ನುವ ತಂತ್ರಜ್ಞಾನಗಳಿದ್ದರೂ ಸಂಪರ್ಕ ಕಡಿಮೆಯಾಗಿದೆ ಎನ್ನುವದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ .


ಹಿಂದಿನ ಕಾಲದಲ್ಲಿ ಸಂಪರ್ಕ ಮಾದ್ಯಮಗಳು ಕಡಿಮೆಯಿದ್ದರೂ ಸಂಬಂಧಗಳು ಅವುಗಳ ಗಟ್ಟಿತನವನ್ನು ಉಳಿಸಿಕೊಂಡಿದ್ದವು. ಸಂಪರ್ಕ ಕಷ್ಟ ಸಾದ್ಯ ಎನ್ನುವ ಕಾಲದಲ್ಲೂ ಆದರ್ಶ ಸ್ನೇಹ ಮೆರೆದ ಎಷ್ಟು ಸ್ನೇಹಿತರ ಕಥೆ ಕೇಳಿಲ್ಲ ನಾವು ?? ಪತ್ರ ಮುಖೇನ ಒಂದಾದ ಎಷ್ಟು ಪ್ರೇಮಕಥನಗಳಿಲ್ಲ .?? ಹಬ್ಬಹರಿದಿನಗಳಿಗೆ ಕರೆದು ಕಳುಹಿಸಿ ಮಾಡಿದ ಎಷ್ಟು ಅಣ್ಣ ತಮ್ಮಂದಿರಿಲ್ಲ?? ಆಷಾಢದ ವಿರಹದ ಹೊರೆಯನ್ನು ಪತ್ರಗಳಲ್ಲೇ ನಿವೇದಿಸಿಕೊಂಡ ಅದೆಷ್ಟು ದಂಪತಿಗಳಿಲ್ಲ?? Advanced generation ಎಂದು ಕರೆಸಿಕೊಳ್ಳುತ್ತ, ದಿನ ದಿನಕ್ಕೂ ಹೊಸ ಅವಿಷ್ಕಾರಗಳನ್ನು ಬಳಸುತ್ತಿರುವ ನಮಗೆ ಅವೆಲ್ಲ ಬಾಲಮಂಗಳ , ಚಂದಮಾಮದಲ್ಲಿ ಬರುತ್ತಿದ್ದ ಕಾಲ್ಪನಿಕ ಕಥೆಗಳಂತೆ ಭಾಸವಾಗುತ್ತವೆ. ಆದರೆ ಅವೆಲ್ಲ ವಾಸ್ತವಗಳಾಗಿದ್ದವು.


ಕಾಲದೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುವ ನಮಗೆ ಸಮಯ ಕಡಿಮೆ ಬೀಳುತ್ತಿದೆ. ಉದ್ಯೋಗ, ಉನ್ನತಿ, ಹಣ, ಖ್ಯಾತಿಗಳು ನಮ್ಮನ್ನು ಉತ್ತುಂಗಕ್ಕೆರಿಸುತ್ತಿದ್ದರೂ ಸಂಬಂಧಗಳ ನಿಭಾಯಿಸುವಿಕೆಯಲ್ಲಿ ನಾವು ಸೋಲುತ್ತಿದ್ದೆವಾ?? ಎನಿಸುತ್ತಿದೆ.ಹಾಗಂತ ಈ ಸಂಬಂಧಗಳು ಹಳಸಿಹೊಗಿರುವುದಿಲ್ಲ, ಅಳಿಸಿಯೂಹೊಗಿರುವುದಿಲ್ಲ,ಸ್ವಲ್ಪ ಮಸುಕಾಗಿರುತ್ತವೆ ಅಷ್ಟೇ; ತುಂಬಾ ದಿನ ಮುದ್ದಾಡದೆ show case ನಲ್ಲಿ ಇಟ್ಟ ಮುದ್ದು ಗೊಂಬೆಯ ಮೇಲೆ ಧೂಳು ಕುಳಿತಿರುವಂತೆ. ವಿಶೇಷ ಸಂಧರ್ಬಗಳಲ್ಲಿ ನಮ್ಮವರಿಗೆ ನಾವು ಮಾಡುವ ವಿಶ್ ಅವರಿಗೆ ಧೈರ್ಯ ಅಥವಾ ಖುಷಿ ನೀಡಬಹುದು. ಎಲ್ಲೋ ಒಂದು surprise visit ಅವರ ಮನಸ್ಸನ್ನು ಮುದಗೊಳಿಸಬಹುದು ಅಥವಾ ನಮ್ಮವರೊಂದಿಗಿನ ಒಂದು trip ಅಥವಾ ಒಂದು Get together ನಮ್ಮ ಎಲ್ಲ ಒತ್ತಡಗಳನ್ನು ತಣಿಸಬಲ್ಲದು. ಅಯ್ಯೋ ಅದಕ್ಕೆಲ್ಲ ಸಮಯವೆಲ್ಲಿದೆ ಎಂದುಕೊಂಡರೆ ಈ ಮೊಬೈಲ್ ಎಂಬ ಮಾಯಾಂಗನೆ ದಿನ ನಿತ್ಯದ ಅಗತ್ಯವಾಗಿರುವಾಗ , love You, Miss You, Take care ಅಥವಾ ಪುಟ್ಟದಾದ Good Morning ಮೆಸೇಜ್ ಗಳನ್ನು ಎರಡೇ ನಿಮಿಷದಲ್ಲಿ ಟೈಪ್ ಮಾಡಿ ಸಂಬಂಧಪಟ್ಟವರಿಗೆ ಕಳುಹಿಸಿದರೆ ಮುಂದಿನ ಎರಡೇ ನಿಮಿಷದಲ್ಲಿ ನಮಗೆ ಕಾಣದಿದ್ದರೂ ನಮಗಾಗಿಯೇ ಅವರ ಮುಖದಲ್ಲಿ ಒಂದು ಕಿರುನಗೆ ಅರಳಿರುತ್ತದೆ . ಆದರೆ ಅಂಥಹದ್ದೊಂದು ಸುಂದರ ಕಿರುನಗೆಯೊಂದನ್ನು ನಮಗಾಗಿ ನಾವೇ ಸೃಷ್ಟಿ ಮಾಡಿಕೊಳ್ಳಲು ನಮಗೆ ಸಮಯವಿಲ್ಲ.


ಸಮಯ ಯಾರಿಗಾಗಿಯೂ ನಿಲ್ಲುವುದಿಲ್ಲ. ಸಮಯಕ್ಕೆ ಹೊಂದಿಕೊಳ್ಳಲೇ ಬೇಕು. ಬದಲಾಗುತ್ತಿರಲೇ ಬೇಕು...


ಆದರೆ ಈ ಸಮಯದೊಂದಿಗೆ ಓಡುತ್ತಲೇ ನಾವು ಸಂಬಂಧಗಳ ನೆಲೆಗಟ್ಟನ್ನು ಗಟ್ಟಿಯಾಗಿಸಿಕೊಳ್ಳಬೇಕು ಅಲ್ಲವೇ ...

Monday 4 June 2012

ನಗೆಮಲ್ಲಿಗೆ..


ಕೆನ್ನೆ  ಕೆಂಪಿನ  
ರಂಗಿನೋಕುಳಿಯಲ್ಲಿ..
      ನಾಚಿಕೆಯ ನಗೆಮಲ್ಲಿಗೆ
 ಘಮಘಮಿಸುತ್ತಿತ್ತು..
     ನಲ್ಲ ನೀಡಿದ ಪ್ರೀತಿಯ
 ಸಿಹಿಮುತ್ತುಗಳಿಂದ..




ಸಾಕ್ಷಿ ........


ಬೆಳಿಗ್ಗೆ ನನ್ನ ಕಂಡ ಕನ್ನಡಿಯೂ
ನಾಚಿಕೊಂಡಂತಿತ್ತು ..
ಕಾರಣ ನಲ್ಲನ ತುಂಟಾಟಗಳಿಗೆ 
ಕೆನ್ನೆಮೆಲಿನ ಗುರುತು 
ಸಾಕ್ಷಿ ಹೇಳುತ್ತಿತ್ತು...